ದೇಶ

ನೇಮಕಾತಿ ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆಯಲು ಪರೀಕ್ಷಾ ಕೇಂದ್ರಗಳ ಸುತ್ತ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತ

Ramyashree GN

ದಿಸ್ಪುರ: ವಿವಿಧ ಇಲಾಖೆಗಳಲ್ಲಿನ 27,000 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ನಡೆಯುತ್ತಿರುವ ಪ್ರಮುಖ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ನಕಲು ಮಾಡುವುದನ್ನು ತಡೆಯಲು ಅಸ್ಸಾಂ ರಾಜ್ಯ ಸರ್ಕಾರವು ಪರೀಕ್ಷಾ ಕೇಂದ್ರಗಳ ಸುತ್ತ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಪರೀಕ್ಷೆಯು ರಾಜ್ಯದ ಅತಿದೊಡ್ಡ ನೇಮಕಾತಿ ಅಭಿಯಾನದ ಭಾಗವಾಗಿದ್ದು, ಇದಕ್ಕಾಗಿ ಸುಮಾರು 14 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

ಪರೀಕ್ಷೆ ನಡೆಯುವ ಎಲ್ಲಾ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳು ಲಭ್ಯವಿರುವುದಿಲ್ಲ. ಅಲ್ಲದೆ, ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿರುವುದರಿಂದ ಸಿಆರ್‌ಪಿಸಿಯ ಸೆಕ್ಷನ್ 144 ವಿಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ನಿಯಮಗಳ ಪ್ರಕಾರ, ಅಭ್ಯರ್ಥಿಗಳು ಮತ್ತು ಇನ್ವಿಜಿಲೇಟರ್‌ಗಳು ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಫೋನ್ ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಕೊಂಡೊಯ್ಯುವುದನ್ನು ನಿರ್ಬಂಧಿಸಲಾಗಿದೆ. ಇದರೊಂದಿಗೆ ಪ್ರತಿ ಪರೀಕ್ಷಾ ಕೇಂದ್ರದ ವಿಡಿಯೋ ಚಿತ್ರೀಕರಿಸಲು ಉಸ್ತುವಾರಿ ಕೇಂದ್ರದವರಿಗೆ ಸೂಚಿಸಲಾಗಿದೆ.

ಇದಕ್ಕೂ ಮುನ್ನ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದರು. ಪರೀಕ್ಷೆ ನಡೆಸುವಾಗ ನಿರಾಸಕ್ತಿ ತೋರಬಾರದು ಎಂದು ಸಭೆಯಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗ್ರೇಡ್-III ಮತ್ತು ಗ್ರೇಡ್-IV ಹುದ್ದೆಗಳನ್ನು ಭರ್ತಿ ಮಾಡಲು ಇಂದು ಮೊದಲ ಹಂತದ ಪರೀಕ್ಷೆ ನಡೆಯುತ್ತಿದ್ದು, ಆಗಸ್ಟ್ 28 ಮತ್ತು ಸೆಪ್ಟೆಂಬರ್ 11 ರಂದು ಇನ್ನುಳಿದ ಪರೀಕ್ಷೆಗಳು ನಡೆಯಲಿದೆ.

SCROLL FOR NEXT