ದೇಶ

ದೆಹಲಿ ಮದ್ಯ ಹಗರಣ: ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಶಾಮೀಲು, ಅಮಿತ್ ಅರೋರಾ ಪ್ರಮುಖ ವ್ಯಕ್ತಿ! 

Srinivas Rao BV

ನವದೆಹಲಿ: ದೆಹಲಿಯಲ್ಲಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ 15 ಮಂದಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿ ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಅವರ ನಿವಾಸದ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಈ ಹಗರಣದಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಶಾಮೀಲಾಗಿರುವುದು ಪ್ರಾಥಮಿಕ ವರದಿಗಳಿಂದ ದೃಢಪಟ್ಟಿದ್ದು, ಅಮಿತ್ ಅರೋರಾ ಪ್ರಮುಖ ವ್ಯಕ್ತಿ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ತನಿಖಾ ಸಂಸ್ಥೆಗಳಿಂದ ಒತ್ತಡ: ಹೊಸ ಅಬಕಾರಿ ನೀತಿ ಹಿಂಪಡೆದ ಕೇಜ್ರಿವಾಲ್ ಸರ್ಕಾರ!
 
ಗುರುಗ್ರಾಮದ ಮೂಲದ ಬಡ್ಡಿ ರೀಟೇಲ್ ಪ್ರೈವೇಟ್ ಲಿಮಿಟೆಡ್ (Buddy Retail Pvt Limited) ನ ಅಮಿತ್ ಅರೋರಾ ಮೂಲಕವೇ ಹಗರಣದ ಕಾರ್ಯಾಚರಣೆ ನಡೆದಿದ್ದು, ಓರ್ವ ಕಾಂಗ್ರೆಸ್ ನಾಯಕ ಹಾಗೂ ದಕ್ಷಿಣದ ರಾಜಕಾರಣಿ, ಆಮ್ ಆದ್ಮಿ ಪಕ್ಷದ ರಾಜಕಾರಣಿಗಳು, ಅಧಿಕಾರಿಗಳ ಮೂಲಕ ಹಗರಣ ನಡೆದಿದೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ. 

ಆರೋರಾ ಕಂಪನಿಯ ಕಾಗದಪತ್ರಗಳನ್ನು ಸಿಬಿಐ ಈಗ ಪರಿಶೀಲನೆ ನಡೆಸುತ್ತಿದ್ದು, ರಾಜಕಾರಣಿಗಳೊಂದಿಗೆ ಆತನ ಸಂಬಂಧ ಹಾಗೂ ಇತರ ವಿವರಗಳನ್ನು ಸಿಬಿಐ ಕಲೆಹಾಕುತ್ತಿದೆ.
  
ಇಂಜಿನಿಯರಿಂಗ್ ಹಾಗೂ ಉದ್ಯಮ ಅಧ್ಯಯನಗಳ ಹಿನ್ನೆಲೆ ಹೊಂದಿರುವ ಅರೋರಾ, ಹಲವು ಕಂಪನಿಗಳಲ್ಲಿ ನಿರ್ದೇಶಕರಾಗಿದ್ದು, ದೋಷಪೂರಿತ ಮದ್ಯ ನೀತಿಯ ಕರಡು ತಯಾರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಹಾಗೂ ಎಲ್ಲಾ ಫಲಾನುಭವಿಗಳಿಗೂ ಕಿಬ್ಯಾಕ್ ನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಬಡ್ಡಿ ರೀಟೇಲ್ ಪ್ರೈವೆಟ್ ಲಿಮಿಟೆಡ್ (Buddy Retail Pvt Limited) ದೆಹಲಿಯಲ್ಲಿ ಎರಡು ಮದ್ಯ ಝೋನ್ ( ಏರ್ ಪೋರ್ಟ್ ಝೋನ್ ಹಾಗೂ ಝೋನ್ 30) ಗಳನ್ನು ನಿರ್ವಹಿಸುತ್ತಿದೆ. ರಾಜಕಾರಣಿಯೋರ್ವರ ಸಹಾಯದಿಂದ ಅರೋರಾ ಏರ್ ಪೋರ್ಟ್ ಝೋನ್ ನ ಹಕ್ಕುಗಳನ್ನು ಅವರು ಗಳಿಸಿದ್ದರು.

ದೆಹಲಿ ಆಡಳಿತದಲ್ಲಿ ಐಎಎಸ್ ಅಧಿಕಾರಿಗಳಾಗಿದ್ದ ವಿಜಯ್ ಕುಮಾರ್ ದೇವ್ ಹಾಗೂ ಅಂಕುರ್ ಗರ್ಗ್ ಅವರು ಪ್ರಮುಖ ಹುದ್ದೆಯಲ್ಲಿದ್ದಾಗ ಈ ದೋಷಪೂರಿತ ಮದ್ಯ ನೀತಿಯ ಕರಡು ಸಿದ್ಧವಾಗಿತ್ತು ಎಂಬ ಆರೋಪವಿದೆ. 

ಈ ದೋಷಪೂರಿತ ಕರಡು ನೀತಿ ಸಿದ್ಧವಾಗಿದ್ದಾಗ ದೇವ್ ಅವರು ಮುಖ್ಯ ಕಾರ್ಯದರ್ಶಿ ಹಾಗೂ ಗರ್ಗ್ ಅವರ ಸಿಬ್ಬಂದಿ ಅಧಿಕಾರಿಯಾಗಿದ್ದರು, ಪಂಜಾಬ್ ಹಾಗೂ ದೆಹಲಿಯಲ್ಲಿ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಅರೋರಾ, ದೇವ್ ಹಾಗೂ ಗರ್ಗ್ ಅವರೊಂದಿಗೆ ಈ ನೀತಿ ರೂಪಿಸುವಾಗ ನಿರಂತರ ಸಂಪರ್ಕದಲ್ಲಿದ್ದದ್ದು ಈಗ ಬಹಿರಂಗವಾಗಿದೆ.

ಇನ್ನು ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯಲ್ಲೂ ಹಲವು ಲೋಪಗಳು ಸಂಭವಿಸಿರುವುದು ಬೆಳಕಿಗೆ ಬಂದಿದ್ದು, ಕರಡು ನೀತಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಬರೆದ ಪ್ರತಿಕ್ರಿಯೆಯ ಪತ್ರಗಳು ಆಮ್ ಆದ್ಮಿ ಸದಸ್ಯರೇ ಸಿದ್ಧಪಡಿಸಿದ್ದಾಗಿದೆ ಎಂದೂ ಆರೋಪಿಸಲಾಗಿದೆ.

SCROLL FOR NEXT