ದೇಶ

ಬಿಹಾರ: ರಾಜೀನಾಮೆ ನೀಡದ ವಿಧಾನಸಭಾ ಸ್ಪೀಕರ್ ವಿರುದ್ಧ 'ಅವಿಶ್ವಾಸ ನಿರ್ಣಯ' ಮಂಡಿಸಿದ ಆರ್ ಜೆಡಿ

Lingaraj Badiger

ಪಾಟ್ನಾ: ಬಿಹಾರ ವಿಧಾನಸಭಾ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರ ವಿರುದ್ಧ ಆಡಳಿತಾರೂಢ ಆರ್‌ಜೆಡಿ ಸದಸ್ಯರು 'ಅವಿಶ್ವಾಸ ನಿರ್ಣಯ' ಮಂಡಿಸಿದೆ. ಆದರೂ ಸಿನ್ಹಾ ಅವರು ರಾಜೀನಾಮೆ ನೀಡದೇ ಹುದ್ದೆಗೆ ಅಂಟಿಕೊಂಡಿದ್ದಾರೆ.

ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟ ಅಥವಾ ಮಹಾಘಟಬಂಧನ್ ಸರ್ಕಾರ ಆಗಸ್ಟ್ 24 ರೊಳಗೆ ಸ್ಪೀಕರ್ ರಾಜೀನಾಮೆ ನೀಡದಿದ್ದರೆ 'ಅವಿಶ್ವಾಸ ನಿರ್ಣಯ'ವನ್ನು ಮತಕ್ಕೆ ಹಾಕುವ ಸಾಧ್ಯತೆ ಇದೆ.

ನಿಯಮದ ಪ್ರಕಾರ, ಬಹುಮತದಿಂದ ಅಂಗೀಕರಿಸಲ್ಪಟ್ಟ ವಿಧಾನಸಭೆಯ ಅವಿಶ್ವಾಸ ನಿರ್ಣಯದ ಮೂಲಕ ಸ್ಪೀಕರ್ ಅನ್ನು ಅಧಿಕಾರದಿಂದ ತೆಗೆದುಹಾಕಬಹುದು. ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ ಒಟ್ಟು 164 ಸದಸ್ಯರನ್ನು ಹೊಂದಿದ್ದರೆ, ಬಿಜೆಪಿ 77 ಶಾಸಕರನ್ನು ಹೊಂದಿದೆ.

ನಿರ್ಗಮಿತ ರಾಜ್ಯ ವಿಧಾನ ಪರಿಷತ್ ಸಭಾಪತಿ ಅವಧೇಶ್ ನಾರಾಯಣ್ ಸಿಂಗ್ ಕೂಡ ಇದುವರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಏತನ್ಮಧ್ಯೆ, ಬಿಹಾರ ವಿಧಾನಸಭಾ ನೂತನ ಸ್ಪೀಕರ್ ಮತ್ತು ರಾಜ್ಯ ವಿಧಾನ ಪರಿಷತ್ತಿನ ನೂತನ ಅಧ್ಯಕ್ಷರ ಹೆಸರುಗಳ ಬಗ್ಗೆ ಆರ್ ಜೆಡಿ ಮತ್ತು ಜೆಡಿ(ಯು) ಒಮ್ಮತಕ್ಕೆ ಬಂದಿವೆ.

ಹಿರಿಯ ಆರ್‌ಜೆಡಿ ನಾಯಕ ಅವಧ್ ಬಿಹಾರಿ ಚೌಧರಿ ವಿಧಾನಸಭೆ ಸ್ಪೀಕರ್ ಆಗುವ ಸಾಧ್ಯತೆಯಿದ್ದರೆ, ದೇವೇಶ್ ಚಂದ್ರ ಠಾಕೂರ್ ಅವರು ಮುಂದಿನ ರಾಜ್ಯ ವಿಧಾನ ಪರಿಷತ್ತಿನ ಅಧ್ಯಕ್ಷರಾಗುವ ಸಾಧ್ಯತೆಯಿದೆ.

ಆರ್‌ಜೆಡಿ ಅಭ್ಯರ್ಥಿಯಾಗಿ ಚೌಧರಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿವಾನ್‌ನಿಂದ ತಮ್ಮ ಬಿಜೆಪಿ ಪ್ರತಿಸ್ಪರ್ಧಿ ಮತ್ತು ಪಕ್ಷದ ಮಾಜಿ ಸಂಸದ ಓಂ ಪ್ರಕಾಶ್ ಯಾದವ್ ಅವರನ್ನು ಸೋಲಿಸಿದ್ದರು. ಸಿವಾನ್‌ನಿಂದ ಐದು ಬಾರಿ ಆರ್‌ಜೆಡಿ ಶಾಸಕರಾಗಿರುವ ಚೌಧರಿ ಅವರು ಕಳೆದ ವಿಧಾನಸಭಾ ಚುನಾವಣೆಯ ನಂತರ ವಿಧಾನಸಭಾ ಸ್ಪೀಕರ್ ಹುದ್ದೆಗೆ ಸ್ಪರ್ಧಿಸಿದ್ದರು. ಆದರೆ ಅವರು ಬಿಜೆಪಿ ಅಭ್ಯರ್ಥಿ ಸಿನ್ಹಾ ವಿರುದ್ಧ ಪರಾಭವಗೊಂಡಿದ್ದರು.

SCROLL FOR NEXT