ದೇಶ

ಕೋವಿಡ್-19: ದೇಶದಲ್ಲಿ 24 ಗಂಟೆಗಳಲ್ಲಿ 9,531 ಸೋಂಕು ಪ್ರಕರಣ ಪತ್ತೆ, 26 ಮಂದಿ ಸಾವು

Srinivasamurthy VN

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 9,531 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 97,648 ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಪ್ರಕಟಣೆ ಅನ್ವಯ 24 ಗಂಟೆಗಳಲ್ಲಿ ದೇಶಾದ್ಯಂತ 9,531 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,43,48,960 ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ದೇಶದಲ್ಲಿ 26 ಮಂದಿ ಸೋಂಕಿತರನ್ನು ಸಾವನ್ನಪ್ಪಿದ್ದು ಆ ಮೂಲಕ ಕೋವಿಡ್ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 5,27,368ಕ್ಕೆ ಏರಿಕೆಯಾಗಿದೆ. ಕೇರಳ ರಾಜ್ಯವೊಂದರಲ್ಲೇ ನಿನ್ನೆ 10 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಒಟ್ಟು ಸೋಂಕು ಪ್ರಕರಣಗಳ ಪೈಕಿ ಶೇ 0.22ರಷ್ಟು ಸಕ್ರಿಯ ಪ್ರಕರಣಗಳಿದ್ದು, ರಾಷ್ಟ್ರೀಯ ಚೇತರಿಕೆ ದರವು ಶೇ 98.59ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇ 4.15 ರಷ್ಟಿದ್ದರೆ, ವಾರದ ಪಾಸಿಟಿವಿಟಿ ದರ ಶೇ. 3.59ರಷ್ಟಿದೆ. ಅಂತೆಯೇ ಮರಣ ಪ್ರಮಾಣ ಶೇ 1.19ರಷ್ಟಿದೆ. ಇನ್ನು 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 2,29,546 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಆ ಮೂಲಕ ದೇಶದಲ್ಲಿ ಒಟ್ಟಾರೆ ಕೋವಿಡ್ ಪರೀಕ್ಷೆಗಳ ಸಂಖ್ಯೆ 88.27ಕೋಟಿಗೆ ಏರಿಕೆಯಾಗಿದೆ.

ಈವರೆಗೂ ಸೋಂಕಿನಿಂದ 4,37,23,944 ಜನರು ಗುಣಮುಖರಾಗಿದ್ದಾರೆ. ದೇಶದಾದ್ಯಂತ ಲಸಿಕೆ ಅಭಿಯಾನದಡಿ 210.02 ಕೋಟಿ ಕೋವಿಡ್ ಲಸಿಕಾ ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

SCROLL FOR NEXT