ದೇಶ

ದೆಹಲಿ- ವಾರಣಾಸಿ ಬುಲೆಟ್ ರೈಲು ಪ್ರಸ್ತಾಪ: ರೈಲ್ವೆ ಮಂಡಳಿಯಿಂದ ವರದಿ ತಿರಸ್ಕಾರ

Nagaraja AB

ನವದೆಹಲಿ: ದೆಹಲಿ ಮತ್ತು ವಾರಣಾಸಿ ನಡುವಿನ ಉದ್ದೇಶಿತ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಕುರಿತ ವರದಿಯನ್ನು ರೈಲ್ವೆ ಮಂಡಳಿ ತಿರಸ್ಕರಿಸಿದೆ. ಮಾರ್ಗದುದ್ದಕ್ಕೂ ಹಲವು ತಿರುವುಗಳು ಬರುವುದರಿಂದ ಗಂಟೆಗೆ 350 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಬುಲೆಟ್ ರೈಲಿಗೆ ಇದು ಸೂಕ್ತವಲ್ಲ ಎಂದು ರೈಲ್ವೆ ಮಂಡಳಿ ವರದಿ ತಿರಸ್ಕರಿಸಿರುವುದಾಗಿ ಮೂಲಗಳು ಹೇಳಿವೆ.

ಬುಲೆಟ್ ರೈಲು ಯೋಜನೆ ಕುರಿತು ರೈಲ್ವೆ ಮಂಡಳಿ ಕಾರ್ಯದರ್ಶಿ ಆರ್ ಎನ್ ಸಿಂಗ್ ನೇತೃತ್ವದಲ್ಲಿ ಕಳೆದ ವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.  ರಾಷ್ಟ್ರೀಯ ಹೆದ್ದಾರಿ 2ರ ಮಾರ್ಗದುದ್ದಕ್ಕೂ ಬುಲೆಟ್ ರೈಲು ಕಾರಿಡಾರ್ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು.

ಈ ಕುರಿತ ಅಧ್ಯಯನ ವರದಿಯನ್ನು ರಾಷ್ಟ್ರೀಯ  ಹೈ ಸ್ಪೀಡ್ ರೈಲ್ವೆ ಕಾರ್ಪೋರೇಷನ್ ನಿಯಮಿತದಿಂದ ಸಭೆಯಲ್ಲಿ ಮಂಡಿಸಲಾಯಿತು. ಕಡಿಮೆ ಬೆಲೆಯಲ್ಲಿ ಭೂ ಸ್ವಾಧೀನ ಮತ್ತು ಕಡಿಮೆ ನಿರ್ಮಾಣ ವೆಚ್ಚಕ್ಕೆ ಈ ವರದಿ ನೆರವಾಗಲಿದೆ ಎಂದು ಹೇಳಲಾಗಿತ್ತು.

ಆದಾಗ್ಯೂ, ದೆಹಲಿ ಮತ್ತು ವಾರಣಾಸಿ ನಡುವಿನ ಅನೇಕ ಕಡೆಗಳಲ್ಲಿ ತಿರುವುಗಳು ಹೆಚ್ಚಾಗಿ ಬರುವುದರಿಂದ ಗಂಟೆಗೆ 350 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಹೈ ಸ್ಪೀಡ್ ರೈಲಿಗೆ ಅತ್ಯಂತ ಮಾರಕವಾಗಲಿದೆ ಎಂದು ಸಭೆಯಲ್ಲಿ ಹೇಳಲಾಯಿತು ಎಂದು ಮೂಲಗಳು ತಿಳಿಸಿವೆ. ಇದೀಗ ಗಂಟೆಗೆ 160 -200 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ವಂದೇ ಭಾರತ್  ಸೆಮಿ ಹೈ ಸ್ಪೀಡ್ ರೈಲು ಕಾರ್ಯಾಚರಣೆಯತ್ತ ಗಮನ ಹರಿಸುವಂತೆ ರೈಲ್ವೆ ಮಂಡಳಿ ಸಲಹೆ ನೀಡಿದೆ. 

SCROLL FOR NEXT