ದೇಶ

ತೆಲಂಗಾಣ: ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಾಕಾರಿ ಹೇಳಿಕೆ, ಬಿಜೆಪಿ ಶಾಸಕ ರಾಜಾ ಸಿಂಗ್ ಬಂಧನ

Nagaraja AB

ಹೈದರಾಬಾದ್: ಪ್ರವಾದಿ ಮೊಹಮ್ಮದ್ ಕುರಿತ ಅವಹೇಳನಾಕಾರಿ ಹೇಳಿಕೆ ಆರೋಪದ ಮೇಲೆ ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜಾ ಸಿಂಗ್ ವಿರುದ್ಧ ಇಂದು ಬೆಳಗ್ಗೆ ಹೈದ್ರಾಬಾದ್ ದಕ್ಷಿಣ ವಲಯ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.ಐಪಿಸಿ ಸೆಕ್ಷನ್ 505, 153 ಎ, 295ರ ಅಡಿಯಲ್ಲಿ ದಾಬೀರ್ ಪುರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. 

 ಗೊಶಾಮಹಲ್ಕ್ಷೇತ್ರದ ಶಾಸಕರು ನೀಡಿರುವ ಹೇಳಿಕೆಯ ವಿಡಿಯೋ ಬಿಡುಗಡೆಯ ನಂತರ ಸೋಮವಾರ ತಡರಾತ್ರಿ ಹೈದರಾಬಾದಿನ ವಿವಿಧೆಡೆ ಪ್ರತಿಭಟನೆ ಭುಗಿಲೆದಿತ್ತು. ನಗರ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗ ಜಮಾಯಿಸಿದ್ದ ಪ್ರತಿಭಟನಾಕಾರರು, ಬಿಜೆಪಿ ಶಾಸಕ ರಾಜಾಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ವಿವಿಧ ಪೊಲೀಸ್ ಠಾಣೆಗಳಿಗೆ ಅವರನ್ನು ಸ್ಥಳಾಂತರಿಸಿದರು.

ರಾಜಾಸಿಂಗ್ ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಾಕಾರಿ ಹೇಳಿಕೆ ನೀಡುವ ಮೂಲಕ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಸುಮಾರು 250 ಜನರು ದಾಬೀರ್ ಪುರ ಪೊಲೀಸ್ ಠಾಣೆ ಮುಂಭಾಗ ಸೋಮವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾಗಿ ದಾಬೀರ್ ಪುರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ಕೂಡಲೇ ಅವರಿಂದ ಎಲ್ಲಾ ಮಾಹಿತಿ ಪಡೆದಿದ್ದು, ಐಪಿಸಿ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಮುಂದಿನ ವಿಚಾರಣೆ ನಡೆಯುತ್ತಿದೆ ಇಂದು ಇನ್ಸ್ ಪೆಕ್ಟರ್ ಮಾಹಿತಿ ನೀಡಿದ್ದಾರೆ.

SCROLL FOR NEXT