ದೇಶ

ಫರೀದಾಬಾದ್ ನಲ್ಲಿ ಅಮೃತ ಹಾಸ್ಪಿಟಲ್ ಉದ್ಘಾಟಿಸಿದ ಪ್ರಧಾನಿ ಮೋದಿ; ಭಾರತದಲ್ಲೇ ಅತಿದೊಡ್ಡ ಖಾಸಗಿ ಆಸ್ಪತ್ರೆ

Vishwanath S

ನವದೆಹಲಿ: ಹರಿಯಾಣದ ಫರಿದಾಬಾದ್‌ನಲ್ಲಿ 130 ಎಕರೆ ವಿಸ್ತೀರ್ಣದ 2600 ಹಾಸಿಗೆಗಳ ಅತ್ಯಾಧುನಿಕ ಅಮೃತ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಈ ಆಸ್ಪತ್ರೆಯೂ ಆಧುನಿಕತೆ ಮತ್ತು ಆಧ್ಯಾತ್ಮಿಕತೆಯ ಮಿಶ್ರಣವಾಗಿದೆ. ಅಗತ್ಯವಿರುವ ರೋಗಿಗಳಿಗೆ ಇದು ಕೈಗೆಟುಕುವ ಚಿಕಿತ್ಸೆಯ ಮಾಧ್ಯಮವಾಗಲಿದೆ ಎಂದು ಹೇಳಿದರು.

ಮಾತಾ ಅಮೃತಾನಂದಮಯಿ ಮಠದಿಂದ ನಿರ್ವಹಿಸಲ್ಪಡುವ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ, 2,600 ಹಾಸಿಗೆಗಳ ದೇಶದ ಅತಿದೊಡ್ಡ ಖಾಸಗಿ ಆಸ್ಪತ್ರೆಯಾಗಿದೆ. ಇದು ರಾಷ್ಟ್ರೀಯ ರಾಜಧಾನಿ ಪ್ರದೇಶದ (NCR) ಆಧುನಿಕ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸುತ್ತದೆ ಎಂದರು. 

ಇನ್ನು ವಿಶ್ವವಿಖ್ಯಾತ ಮಾನವತಾವಾದಿ, ಆಧ್ಯಾತ್ಮಿಕ ಚೇತನ ಶ್ರೀ ಮಾತಾ ಅಮೃತಾನಂದಮಯಿಯವರ ಆಶೀರ್ವಾದದ ಅಮೃತವನ್ನು ದೇಶವು ಪಡೆಯುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದರು. ಇನ್ನು ಪ್ರಧಾನಿ ಮೋದಿ ಅವರು 'ಅಮ್ಮ' ಅವರಿಂದ ಆಶೀರ್ವಾದ ಪಡೆದಿದ್ದು ಅವರನ್ನು 'ಪ್ರೀತಿ ಮತ್ತು ತ್ಯಾಗದ ಸಾಕಾರ' ಎಂದು ಕರೆದರು.

'ಅಮ್ಮ ಪ್ರೀತಿ, ಸಹಾನುಭೂತಿ, ಸೇವೆ ಮತ್ತು ತ್ಯಾಗದ ಸಾಕಾರಮೂರ್ತಿ. ಅವರು ಭಾರತದ ಆಧ್ಯಾತ್ಮಿಕ ಸಂಪ್ರದಾಯದ ವಾಹಕ'. ಸಂತರ ರೂಪದಲ್ಲಿ ಆಧ್ಯಾತ್ಮಿಕ ಶಕ್ತಿಯಾದ ಅಮ್ಮ ದೇಶದ ಮೂಲೆ ಮೂಲೆಗಳಲ್ಲಿ ಸದಾ ವ್ಯಾಪಿಸಿರುವುದು ನಾಡಿನ ಸೌಭಾಗ್ಯ ಎಂದರು.

ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ಶಿಕ್ಷಣ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ನಿರ್ವಹಿಸುವ ಈ ವ್ಯವಸ್ಥೆಯು ಹಳೆಯ ಕಾಲದ PPP ಮಾದರಿಯಾಗಿದೆ ಎಂದು ಪ್ರಧಾನಿ ಹೇಳಿದರು. "ಇದನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಎಂದು ಕರೆಯಲಾಗುತ್ತದೆ ಆದರೆ ನಾನು ಅದನ್ನು ಪರಸ್ಪರ ಪ್ರಯತ್ನ ಎಂದು ನೋಡುತ್ತೇನೆ ಎಂದು ಮೋದಿ ಹಳಿದರು. 

ದೆಹಲಿ-ಮಥುರಾ ರಸ್ತೆಯ ಬಳಿಯ ಫರಿದಾಬಾದ್-ಸೆಕ್ಟರ್ 88ರಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯು ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

SCROLL FOR NEXT