ದೇಶ

ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಸಾವು ಪ್ರಕರಣ: ಗೋವಾ ಪೊಲೀಸರಿಂದ ಇಬ್ಬರು ಸಹಚರರ ಬಂಧನ

Shilpa D

ಪಣಜಿ: ಹರ್ಯಾಣದ ಬಿಜೆಪಿ ನಾಯಕಿ ಟಿಕ್ ಟಾಕ್ ಸ್ಟಾರ್ ಸೊನಾಲಿ ಪೋಗಟ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊನಾಲಿಯ ಇಬ್ಬರು ಸಹಚರರನ್ನು ಗೋವಾ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ.

ಸೊನಾಲಿ ದೇಹದಲ್ಲಿ ಹಲವಾರು ಗಾಯದ ಗುರುತುಗಳಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಗೊಂಡ ಬೆನ್ನಲ್ಲೇ ಗೋವಾ ಪೊಲೀಸರು ಆಕೆಯ ಇಬ್ಬರು ಸಹಚರರ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ.

ಸೊನಾಲಿ ಪೋಗಟ್ ಸಾವಿನ ಪ್ರಕರಣದಲ್ಲಿ ಆರೋಪಿಗಳಾದ ಸುಧೀರ್ ಸಾಗ್ವಾನ್ ಮತ್ತು ಸುಖ್ ವಿಂದರ್ ವಾಸಿಯನ್ನು ವಶಕ್ಕೆ ಪಡೆಯಲಾಗಿದೆ. ಪೋಗಟ್ ಅವರ ಸಹೋದರ ರಿಂಕು ಧಾಕಾ ಬುಧವಾರ ಅಂಜುನಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಗಳಾದ ಸಾಗ್ವಾನ್ ಮತ್ತು ವಾಸಿ ಹೆಸರನ್ನು ಉಲ್ಲೇಖಿಸಿದ್ದರು.

ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ಮೊದಲಿಗೆ ಹೇಳಲಾಗಿತ್ತು. ಅವರನ್ನು ಉತ್ತರ ಗೋವಾ ಜಿಲ್ಲೆಯ ಅಂಜುನಾ ಪ್ರದೇಶದಲ್ಲಿನ ಸೇಂಟ್ ಆಂಟೋನಿ ಆಸ್ಪತ್ರೆಗೆ ಮಂಗಳವಾರ ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು. ಸಾಯುವ ಮುನ್ನ ತನ್ನ ತಾಯಿ, ಸಹೋದರ ಮತ್ತು ಸೋದರ ಮಾವನ ಜತೆ ಮಾತನಾಡಿದ್ದ ಸೋನಾಲಿ, ಸಾಕಷ್ಟು ಆತಂಕದಲ್ಲಿದ್ದರು. ತನ್ನ ಇಬ್ಬರು ಸಹಚರರ ವಿರುದ್ಧ ದೂರಿದ್ದರು ಎಂದು ಅವರ ಸಹೋದರ ರಿಂಕು ಆರೋಪಿಸಿದ್ದಾರೆ.

ಆಗಸ್ಟ್ 22ರಂದು ಗೋವಾಕ್ಕೆ ಪೋಗಟ್ ಆಗಮಿಸಿದ್ದ ವೇಳೆ ಸಾಗ್ವಾನ್ ಮತ್ತು ವಾಸಿ ಆಕೆಯ ಜತೆಗಿದ್ದರು. ಆಗಸ್ಟ್ 23ರಂದು ಪೋಗಟ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು. ಆದರೆ ಆಕೆಯ ಸಾವಿನ ಬಗ್ಗೆ ಮನೆಯವರು ಸಂಶಯ ವ್ಯಕ್ತಪಡಿಸಿ, ಇದೊಂದು ಕೊಲೆ ಎಂದು ಆರೋಪಿಸಿದ್ದರು.

SCROLL FOR NEXT