ದೇಶ

ಸೋನಾಲಿ ಫೋಗಟ್ ಪ್ರಕರಣ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ರೀತಿಯಲ್ಲಿ ಹೋಗುವುದು ಬೇಡ: ಫೋಗಟ್ ಕುಟುಂಬ

Ramyashree GN

ಸೋನಾಲಿ ಫೋಗಟ್ ಅವರ ನಿಗೂಢ ಸಾವಿನ ಒಂದೊಂದೆ ರಹಸ್ಯಗಳು ಬಯಲಾಗುತ್ತಿರುವಂತೆ, ಸೋನಾಲಿ ಅವರ ಕುಟುಂಬವು ಅವರ ಪ್ರಕರಣವು ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದೊಂದಿಗೆ ಹೋಲಿಸಿದೆ.

ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನಂತೆ ಈ ಪ್ರಕರಣ ನಡೆಯುವುದನ್ನು ನಾವು ಬಯಸುವುದಿಲ್ಲ ಎಂದು ಸೋನಾಲಿ ಫೋಗಟ್ ಅವರ ಕುಟಂಬ ಸದಸ್ಯರಾದ ಕುಲದೀಪ್ ಫೋಗಟ್ ಹೇಳಿದ್ದಾರೆ.

'ಶುಶಾಂತ್ ಅವರು ಕೊಲೆಯಾಗಿದ್ದಾರೆ ಎಂದು ಅವರ ಕುಟುಂಬವೂ ಇಂದಿಗೂ ನಂಬುತ್ತಿದೆ. ನಟಿ ರಿಯಾ ಚಕ್ರವರ್ತಿ ಆತನಿಗೆ ಡ್ರಗ್ಸ್ ಕೊಟ್ಟಿದ್ದಾರೆ.. ಆದರೂ ಆಕೆ ಈಗ ಹೊರಗಿದ್ದಾರೆ. ಪ್ರಕರಣ ಇನ್ನೂ ಮುಕ್ತಾಯಗೊಂಡಿಲ್ಲ. ಈ ಪ್ರಕರಣವು ಮಾದಕ ದ್ರವ್ಯ ವಶಪಡಿಸಿಕೊಂಡಿರುವುದು ಅಥವಾ ಮಾದಕ ದ್ರವ್ಯ ಸೇವನೆ ಬಗ್ಗೆ ಅಲ್ಲ. ಇದು ಕೊಲೆಯ ಬಗ್ಗೆ' ಎಂದು ಅವರು ಹೇಳಿದರು.

'ಸೋನಾಲಿ ಹಂತಕರನ್ನು ಗಲ್ಲಿಗೇರಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಪ್ರಕರಣದಲ್ಲಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂಬುದು ಸಾಬೀತಾಗದಿದ್ದರೆ, ನಾವು ಸಿಬಿಐ ತನಿಖೆಗೆ ಕೇಳುತ್ತೇವೆ ಮತ್ತು ನಾವು ನಾರ್ಕೋ ಪರೀಕ್ಷೆಗೂ ಒತ್ತಾಯಿಸುತ್ತೇವೆ' ಎಂದು ಹೇಳಿದರು.

ಸೋನಾಲಿ ಫೋಗಟ್ ಅವರ ಶವಪರೀಕ್ಷೆಯನ್ನು ಅವರ ಕುಟುಂಬ ಸದಸ್ಯರು ಒಪ್ಪಿಗೆ ನೀಡಿದ ನಂತರವೇ ಗುರುವಾರ ನಡೆಸಲಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ದೇಹದ ಮೇಲೆ ಅನೇಕ ಗಾಯಗಳಾಗಿರುವುದು ಕಂಡುಬಂದಿತ್ತು. ಮರಣೋತ್ತರ ಪರೀಕ್ಷೆಯ ವರದಿ ನಂತರ, ಗೋವಾ ಪೊಲೀಸರು ಸೋನಾಲಿ ಫೋಗಟ್ ಸಾವಿನ ಕುರಿತು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ಈ ಸಂಬಂಧ ರೆಸ್ಟೋರೆಂಟ್ ಮಾಲೀಕ ಮತ್ತು ಶಂಕಿತ ಡ್ರಗ್ ಪೆಡ್ಲರ್ ಸೇರಿದಂತೆ ಮತ್ತಿಬ್ಬರನ್ನು ಗೋವಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕ್ಲಬ್‌ನ ವಾಶ್‌ರೂಮ್‌ನಿಂದ ಪೊಲೀಸರು ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಾಲಿ ಫೋಗಟ್ ಅವರ ಇಬ್ಬರು ಸಹಾಯಕರಾದ ಸುಧೀರ್ ಸಗ್ವಾನ್ ಮತ್ತು ಸುಖವಿಂದರ್ ಸಿಂಗ್ ಅವರನ್ನು  ಬಂಧಿಸಲಾಗಿತ್ತು

34 ವರ್ಷದ ಸುಶಾಂತ್ ಸಿಂಗ್ ರಜಪೂತ್ ಅವರು 2020ರ ಜೂನ್‌ ತಿಂಗಳಲ್ಲಿ ಮುಂಬೈನ ಬಾಂದ್ರಾದಲ್ಲಿನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಾವನ್ನು ಮೊದಲು ಕೊಲೆ ಎಂದು ತನಿಖೆ ಮಾಡಲಾಯಿತು. ಆದರೆ, ನಂತರ ಕೇಂದ್ರದ ತನಿಖಾ ಸಂಸ್ಥೆಗಳು ಮತ್ತು ವೈದ್ಯಕೀಯ ತಜ್ಞರು ಆತ್ಮಹತ್ಯೆ ಎಂದು ತೀರ್ಪು ನೀಡಿದ್ದರು.

SCROLL FOR NEXT