ದೇಶ

ನೋಯ್ಡಾ: ಕೆಲವೇ ಸೆಕೆಂಡುಗಳಲ್ಲಿ ನೆಲಕ್ಕುರುಳಿದ ಅವಳಿ ಗೋಪುರದ ಕಟ್ಟಡಗಳು

Ramyashree GN

ನೋಯ್ಡಾ: ನಿಯಮ ಬಾಹಿರವಾಗಿ ನಿರ್ಮಿಸಿದ್ದ ಕಟ್ಟಡವನ್ನು ನೆಲಸಮ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಒಂದು ವರ್ಷದ ಬಳಿಕ ನೋಯ್ಡಾದಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ಸೂಪರ್‌ಟೆಕ್ ಅವಳಿ ಗೋಪುರಗಳನ್ನು ಕೇವಲ ಕೆಲವೇ ಸೆಕೆಂಡುಗಳಲ್ಲಿ ಇಂದು (ಭಾನುವಾರ) ನೆಲಸಮ ಮಾಡಲಾಗಿದೆ.

ದೆಹಲಿಯ ಐತಿಹಾಸಿಕ ಕುತುಬ್ ಮಿನಾರ್ (73 ಮೀಟರ್) ಗಿಂತಲೂ ಎತ್ತರವಾಗಿದ್ದ ಸುಮಾರು 100 ಮೀಟರ್ ಎತ್ತರದ ಕಟ್ಟಡವನ್ನು ಸ್ಫೋಟಕಗಳನ್ನು ಬಳಸಿ 'ಜಲಪಾತದ ಸ್ಫೋಟ' ತಂತ್ರದಿಂದ ಸೆಕೆಂಡುಗಳಲ್ಲಿ ನೆಲಕ್ಕುರುಳಿಸಲಾಯಿತು.

ಈ ಅವಳಿ ಗೋಪುರದ ಕಟ್ಟಡಗಳು ಭಾರತದಲ್ಲಿ ಕೆಡವಿರುವ ಅತಿ ಎತ್ತರದ ಕಟ್ಟಡಗಳಾಗಿವೆ.

ಅಪೆಕ್ಸ್ (32 ಮಹಡಿಗಳು) ಮತ್ತು ಸೆಯಾನೆ (29 ಮಹಡಿಗಳು) ಟವರ್‌ಗಳು 2009 ರಿಂದ ದೆಹಲಿಯ ರಾಷ್ಟ್ರ ರಾಜಧಾನಿಗೆ ಹೊಂದಿಕೊಂಡಿರುವ ನೋಯ್ಡಾದ ಸೆಕ್ಟರ್ 93A ನಲ್ಲಿರುವ ಸೂಪರ್‌ಟೆಕ್ ಎಮರಾಲ್ಡ್ ಕೋರ್ಟ್ ಹೌಸಿಂಗ್ ಸೊಸೈಟಿಯೊಳಗೆ ನಿರ್ಮಾಣ ಹಂತದಲ್ಲಿದ್ದವು.

ಕಟ್ಟಡಗಳನ್ನು ಉರುಳಿಸಲು 3,700 ಕೆಜಿ ಸ್ಫೋಟಕಗಳನ್ನು ಬಳಸಲಾಗಿದೆ.

ನೆಲಸಮಗೊಳಿಸುವುದಕ್ಕೂ ಮುನ್ನ ಕಟ್ಟಡದ ಸುತ್ತಲೂ ನಾಗರಿಕರ ಸುರಕ್ಷತೆ ಹಾಗೂ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಪ್ರಾಂತೀಯ ಸಶಸ್ತ್ರ ಪಡೆಗಳ (ಪಿಎಸಿ) ಜೊತೆಗೆ 500 ಪೊಲೀಸ್‌ ಹಾಗೂ ಸಂಚಾರ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿಯಮಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಇಂದು ಮಧ್ಯಾಹ್ನ 2.30ಕ್ಕೆ ನೆಲಸಮಗೊಳಿಸಲು ಸಮಯ ನಿಗದಿಪಡಿಸಲಾಗಿತ್ತು. ಕಟ್ಟಡದ ಸುತ್ತಲಿನ 500 ಚದರ ಮೀಟರ್‌ ಪ್ರದೇಶವನ್ನು ನಿಷೇಧಿತ ವಲಯ ಎಂದೂ ಘೋಷಿಸಲಾಗಿತ್ತು.

ಅವಳಿ ಕಟ್ಟಡ ಉರುಳಿಸಲು ಕಾರಣಗಳೇನು?

1. ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ಸೂಪರ್‌ಟೆಕ್‌ ಕಂಪನಿ ನಿಯಮ ಬಾಹಿರವಾಗಿ 100 ಮೀಟರ್ ಎತ್ತರದ ಅವಳಿ ಕಟ್ಟಡಗಳನ್ನು ನಿರ್ಮಾಣ ಮಾಡಿತ್ತು. ನಿಯಮ ಉಲ್ಲಂಘನೆಯಿಂದಾಗಿ ಈ ಕಟ್ಟಡಗಳನ್ನು ನೆಲಮಸ ಮಾಡುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು.

2) ನೋಯ್ಡಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಎಡಿಫೈಸ್ ಇಂಜಿನಿಯರ್ ಕಂಪನಿಯು ₹ 20 ಕೋಟಿ ಖರ್ಚಿನಲ್ಲಿ ಸುಮಾರು 3,700 ಕೆ.ಜಿ ಸ್ಫೋಟಕಗಳನ್ನು ಬಳಸಿ ಕಟ್ಟಡಗಳನ್ನು ನೆಲಸಮಗೊಳಿಸಿದೆ.

3) ಕಟ್ಟಡ ನಿರ್ಮಾಣದ ಮೂಲ ನಕ್ಷೆಯಲ್ಲಿ 14 ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಕಂಪನಿಯು 40 ಮಹಡಿಗಳ ಕಟ್ಟಡ ನಿರ್ಮಾಣ ಮಾಡುವುದಲ್ಲದೆ, ಉದ್ಯಾನ ನಿರ್ಮಾಣದ ಸ್ಥಳದಲ್ಲಿ ಈ ಅವಳಿ ಕಟ್ಟಡಗಳನ್ನು ನಿರ್ಮಿಸಿತ್ತು.

4) 2012ರಲ್ಲಿ ಸ್ಥಳೀಯ ನಿವಾಸಿಗಳು ಕಾನೂನುಬಾಹಿರವಾಗಿ ಈ ಅವಳಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅಲಹಾಬಾದ್ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಬಳಿಕ 2014ರಲ್ಲಿ ನ್ಯಾಯಾಲಯ ನಿವಾಸಿಗಳ ಪರವಾಗಿ ತೀರ್ಪು ನೀಡಿತು. 4 ತಿಂಗಳ ಒಳಗಾಗಿ ಕಂಪನಿಯು ತನ್ನ ಸ್ವಂತ ಖರ್ಚಿನಲ್ಲಿ ಕಟ್ಟಡಗಳನ್ನು ನೆಲಸಮ ಮಾಡಬೇಕೆಂದು ಆದೇಶ ನೀಡಿತ್ತು.

5) ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಫ್ಲಾಟ್‌ ಖರೀದಿದಾರರು ಮತ್ತು ಕಂಪನಿಯು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅಂತಿಮವಾಗಿ ಸುಪ್ರೀಂ ಕೋರ್ಟ್ ಕೂಡ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದು, ಕಟ್ಟಡಗಳನ್ನು ನೆಲಸಮ ಮಾಡುವಂತೆ ಆದೇಶಿಸಿತ್ತು.

SCROLL FOR NEXT