ದೇಶ

'ಡಿಜಿಟಲ್' ಕಳ್ಳ: ಕದ್ದ ಮೊಬೈಲ್ ಫೋನ್ ಗಳನ್ನು ಹಿಂದುರುಗಿಸಲು ಆನ್‌ಲೈನ್ ಪಾವತಿ ಕೇಳಿದ ಭೂಪ!

Srinivasamurthy VN

ಮುಂಬೈ: ಮಹಾರಾಷ್ಟ್ರದಲ್ಲಿನ ಖತರ್ನಾಕ್ ಕಳ್ಳನೋರ್ವ ತಾನು ಕದ್ದ ಮೊಬೈಲ್ ಫೋನ್ ಹಿಂದುರುಗಿಸಲು ಆನ್‌ಲೈನ್ ಪಾವತಿ ಕೇಳಿ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು.. ಮಹಾರಾಷ್ಟ್ರದ ಮೊಬೈಲ್ ಕಳ್ಳನೋರ್ವ ತಾವು ಕದ್ದ ಮೊಬೈಲ್ ಗಳನ್ನು ಹಿಂದುರಿಗಿಸಲು ಸಂತ್ರಸ್ಥರಿಂದ ತನ್ನ ಡಿಜಿಟಲ್ ಪಾವತಿ ಖಾತೆಗೆ ಹಣ ಹಾಕುವಂತೆ ಹೇಳಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಖತರ್ನಾಕ್ ಕಳ್ಳನನ್ನು ವಾಸಿಂ ಖುರೇಷಿ ಎಂದು ಗುರುತಿಸಲಾಗಿದ್ದು, ಈತ ವೃತ್ತಿಪರ ಮೊಬೈಲ್ ಕಳ್ಳ ಎನ್ನಲಾಗಿದೆ. ಅವನು ಇತ್ತೀಚೆಗೆ ತಾನು ಕೆಲಸಕ್ಕೆ ಸೇರಿದ್ದ ಉಪನಗರ ಕುರ್ಲಾದ ಬೇಕರಿಯಲ್ಲಿ ಕೆಲಸದ ಮೊದಲ ದಿನವೇ  ತನ್ನ ಸಹೋದ್ಯೋಗಿಗಳ ನಾಲ್ಕು ಮೊಬೈಲ್ ಫೋನ್‌ಗಳನ್ನು ಕದ್ದಿದ್ದ. ನಂತರ, ಸಹೋದ್ಯೋಗಿಯೊಬ್ಬರು ಖುರೇಷಿ ಅವರ ಫೋನ್ ಸಂಖ್ಯೆ ಪಡೆದು ಸಂಪರ್ಕಿಸಿದ್ದಾರೆ. ಈ ವೇಳೆ ಖುರೇಷಿ ಸಂತ್ರಸ್ತರಿಗೆ ತಮ್ಮ ಡಿಜಿಟಲ್ ಪಾವತಿ ಖಾತೆಗೆ ಹಣವನ್ನು ವರ್ಗಾಯಿಸಿದ ನಂತರ ಅವರ ಮೊಬೈಲ್ ಫೋನ್‌ಗಳನ್ನು ಹಿಂದಿರುಗಿಸುವುದಾಗಿ ಹೇಳಿದ್ದಾನೆ.

ಇದಾದ ಬಳಿಕ ಆರೋಪಿ ಖುರೇಷಿ ಪ್ರತಿದಿನ ಸಂತ್ರಸ್ತರಿಗೆ ಹಣ ಕೇಳಲು ಪ್ರಾರಂಭಿಸಿದ. ಅವನ ಹಣದ ಬೇಡಿಕೆಯಿಂದ ಬೇಸತ್ತು ಸಂತ್ರಸ್ತರಲ್ಲಿ ಒಬ್ಬರು ಪೊಲೀಸ್ ದೂರು ದಾಖಲಿಸಿ ಎಫ್‌ಐಆರ್ ದಾಖಲಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖುರೇಷಿಯನ್ನು ಬಂಧಿಸಿ ಠಾಣೆಗೆ ಕರೆದಿದ್ದಾರೆ. ಅಲ್ಲದೆ ಪೊಲೀಸರು ಆತನಿಂದ ಹತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, ಖುರೇಷಿ ಮುಂಬೈನ ವಿವಿಧ ವಾಣಿಜ್ಯ ಘಟಕಗಳಿಗೆ ಭೇಟಿ ನೀಡುತ್ತಿದ್ದ. ನಂತರ ಮೊಬೈಲ್ ಕದಿಯುತ್ತಿದ್ದ. ಬಂಧನದಿಂದ ತಪ್ಪಿಸಿಕೊಳ್ಳಲು ಆತ ತನ್ನ ಗುರುತಿನ ಚೀಟಿಗಳನ್ನು ಎಂದಿಗೂ ಸಲ್ಲಿಸಿರಲಿಲ್ಲ. ಖುರೇಷಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 380 (ವಾಸದ ಮನೆಯಲ್ಲಿ ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಿ ಬಿ ನಗರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಭೌಸಾಹೇಬ್ ಸೋನಾವಾನೆ ತಿಳಿಸಿದ್ದಾರೆ.

SCROLL FOR NEXT