ಜಮ್ಮು: ಗುಲಾಂ ನಬಿ ಆಜಾದ್ ಅವರ ಹಾದಿಯನ್ನೇ ಅನುಸರಿಸಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಜಿ.ಎಂ. ಸರೂರಿ ನೇತೃತ್ವದಲ್ಲಿ ಸಭೆ ನಡೆಸಿ ಹಿರಿಯ ನಾಯಕನ ಮುಂದಿನ ಪ್ರಯತ್ನದಲ್ಲಿ ಬೆಂಬಲ ನೀಡುವುದಾಗಿ ಘೋಷಿಸಿದರು.
ಆಗಸ್ಟ್ 26 ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕಾಂಗ್ರೆಸ್‌ನ ಹಿರಿಯ ನಾಯಕ ಆಜಾದ್ ಅವರು ಸೆಪ್ಟೆಂಬರ್ 4 ರಂದು ಜಮ್ಮುವಿಗೆ ಆಗಮಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ವೇಳೆಗೆ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ ಎನ್ನಲಾಗಿದೆ.
'ಕಾರ್ಪೊರೇಟರ್‌ಗಳು, ಪಂಚಾಯಿತಿ ಸದಸ್ಯರು ಮತ್ತು ಬ್ಲಾಕ್ ಮಟ್ಟದ ನಾಯಕರು ಸೇರಿದಂತೆ 500ಕ್ಕೂ ಹೆಚ್ಚು ಪ್ರಮುಖ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಆಜಾದ್ ಅವರನ್ನು ಬೆಂಬಲಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ನಾವೆಲ್ಲರೂ ಆಜಾದ್ ಜೊತೆಗಿದ್ದೇವೆ ಎಂಬ ಸಂದೇಶವನ್ನು ಕಳುಹಿಸಲು ಸಭೆಯನ್ನು ಕರೆಯಲಾಗಿದೆ' ಎಂದು ಸರೂರಿ ಭಾನುವಾರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
'ಮುಂದಿನ ದಿನಗಳಲ್ಲಿ, ದೇಶದಾದ್ಯಂತ ರಾಜಕೀಯ ದಿಗ್ಗಜರು ಆಜಾದ್ ಅವರ ಪಕ್ಷದ ಸದಸ್ಯರಾಗುವ ಮೂಲಕ ಅವರ ಕೈಗಳನ್ನು ಬಲಪಡಿಸುವುದನ್ನು ನೀವು ನೋಡುತ್ತೀರಿ. ನವೆಂಬರ್‌ನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಂಡ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನವೆಂಬರ್ 25ರಂದು ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಆಜಾದ್ ಅವರ ಗಮನವು ಇದರ ಮೇಲಿದೆ" ಎಂದು ಹೇಳಿದರು.
ಇದನ್ನೂ ಓದಿ: ಗುಲಾಂ ನಬಿ ಆಜಾದ್ ನಿರ್ಗಮನ; 'ಕಾಂಗ್ರೆಸ್' ಭವಿಷ್ಯದ ಬಗ್ಗೆ ನಾಯಕರುಗಳಿಗೆ ಅನುಮಾನ; ಮತ್ತಷ್ಟು 'ಕೈ' ವಿಕೆಟ್ ಪತನ?
ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಸರೂರಿ ಮಾತನಾಡಿ, 'ಹೊಸ ಪಕ್ಷವು ಎಲ್ಲಾ 90 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲಾ ಜಾತ್ಯತೀತ ಮನೋಭಾವದ ಜನರು ಮತ್ತು ಪಕ್ಷಗಳಿಗೆ ಹೊಸ ಪಕ್ಷದ ಬಾಗಿಲು ತೆರೆದಿರುತ್ತದೆ' ಎಂದು ಮಾಹಿತಿ ನೀಡಿದರು.
ಮಾಜಿ ಶಾಸಕರಾದ ಹಾಜಿ ಅಬ್ದುಲ್ ರಶೀದ್, ಮೊಹಮ್ಮದ್ ಅಮೀನ್ ಭಟ್, ಗುಲ್ಜಾರ್ ಅಹ್ಮದ್ ವಾನಿ ಮತ್ತು ಚೌಧರಿ ಮೊಹಮ್ಮದ್ ಅಕ್ರಂ ಸಭೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಅಡ್ವೊಕೇಟ್ ಜನರಲ್ ಮೊಹಮ್ಮದ್ ಅಸ್ಲಂ ಗೋಣಿ ಸೇರಿದಂತೆ ಹಲವು ಹೊಸ ಮುಖಗಳು ಆಜಾದ್ ಶಿಬಿರಕ್ಕೆ ಸೇರ್ಪಡೆಗೊಂಡಿವೆ.
ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ 73 ವರ್ಷದ ಗುಲಾಂ ನಬಿ ಆಜಾದ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲ ಹುದ್ದೆಗಳಿಗೆ ಶುಕ್ರವಾರ ರಾಜೀನಾಮೆ ನೀಡುವ ಮೂಲಕ ತಮ್ಮ ಐದು ದಶಕಗಳ ಒಡನಾಟವನ್ನು ಕೊನೆಗೊಳಿಸಿದರು. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರವಾನಿಸಿದ ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಆಜಾದ್, ‘ಕಳೆದ ಎಂಟು ವರ್ಷಗಳಲ್ಲಿ ಕಾಂಗ್ರೆಸ್ ನಾಯಕತ್ವದ ಚುಕ್ಕಾಣಿಯನ್ನು ಗಂಭೀರವಲ್ಲದ ವ್ಯಕ್ತಿಯೊಬ್ಬರ ಕೈಗೆ ನೀಡಲು ಯತ್ನಗಳು ನಡೆದವು. ಪಕ್ಷಕ್ಕೊಸ್ಕರ ಜೀವನವನ್ನೇ ಮುಡಿಪಾಗಿಟ್ಟ ಪ್ರಮುಖ ನಾಯಕರನ್ನು ಕಡೆಗಣಿಸಲಾಯಿತು. ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಗೆ ಇದೆಲ್ಲವೂ ಕಾರಣ’ ಎಂದು ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ಗುಲಾಂ ನಬಿ ಆಜಾದ್ ಬೆನ್ನಲ್ಲೇ ಮಾಜಿ ಸಚಿವ ಆರ್ ಎಸ್ ಚಿಬ್ ಸೇರಿ ಐವರು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ!
ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸ್ವಂತ ಬಲದ ಮೇಲೆ ಗೆಲ್ಲುವ ಸಾಮರ್ಥ್ಯವನ್ನು ನಮ್ಮ ಪಕ್ಷ ಹೊಂದಿದೆ. ಬಿಜೆಪಿಯು ಯಾವುದೇ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ. 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮುಂದಿನ ಮುಖ್ಯಮಂತ್ರಿ ಬಿಜೆಪಿಯವರೇ ಆಗಿರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.