ದೇಶ

ರಫೇಲ್ ಯುದ್ಧ ವಿಮಾನ ಒಪ್ಪಂದ ಕುರಿತು ಹೊಸ ತನಿಖೆ ನಡೆಸಲು ಕೋರಿ ಸಲ್ಲಿಸಿದ್ದ ಅರ್ಜಿ: ಸುಪ್ರೀಂ ಕೋರ್ಟ್ ತಿರಸ್ಕಾರ

Sumana Upadhyaya

ನವದೆಹಲಿ: ಭಾರತ ಮತ್ತು ಫ್ರಾನ್ಸ್ ದೇಶಗಳ ನಡುವಿನ 36 ರಫೇಲ್ ಜೆಟ್‌ಗಳ ಖರೀದಿ ಒಪ್ಪಂದ ಕುರಿತು ಹೊಸದಾಗಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(PIL) ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠ, ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಹೊಸ ಸಾಕ್ಷ್ಯಗಳನ್ನು ಸಂಗ್ರಹಿಸಲು ರೋಗೇಟರಿ ಪತ್ರಗಳನ್ನು (letters rogatory-ವಿದೇಶಿ ನ್ಯಾಯಾಲಯಕ್ಕೆ ಸಹಾಯ ಕೋರಿ ಪತ್ರ ಬರೆಯುವುದು) ನೀಡಲು ನಿರ್ದೇಶನವನ್ನು ನೀಡಬೇಕೆಂದು ವಕೀಲ ಎಂ.ಎಲ್.ಶರ್ಮಾ ಸಲ್ಲಿಸಿದ ಸಲ್ಲಿಕೆಯನ್ನು ಪರಿಗಣಿಸಿತು.

ಒಪ್ಪಂದವನ್ನು ತನ್ನ ಪರವಾಗಿ ಪಡೆಯಲು ಮಧ್ಯವರ್ತಿಯೊಬ್ಬರಿಗೆ ಡಸಾಲ್ಟ್ ಏವಿಯೇಷನ್‌ ಒಂದು ಶತಕೋಟಿ ಯುರೋಗಳನ್ನು ಪಾವತಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದರು. ಹೊಸ ಪಿಐಎಲ್ ನ್ನು ಪರಿಗಣಿಸಲು ಪೀಠ ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ಶರ್ಮಾ ಅವರು ಪಿಐಎಲ್ ಹಿಂಪಡೆಯಲು ನಿರ್ಧರಿಸಿದರು.

ಡಿಸೆಂಬರ್ 14, 2018 ರಂದು, 36 ರಫೇಲ್ ಜೆಟ್‌ಗಳ ಖರೀದಿಗಾಗಿ ಭಾರತ ಮತ್ತು ಫ್ರಾನ್ಸ್ ನಡುವಿನ ಒಪ್ಪಂದವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

SCROLL FOR NEXT