ದೇಶ

ಉತ್ತರ ಪ್ರದೇಶ ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ಭೂಪೇಂದ್ರ ಚೌಧರಿ ರಾಜೀನಾಮೆ

Lingaraj Badiger

ನವದೆಹಲಿ: ಇತ್ತೀಚೆಗೆ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಉತ್ತರ ಪ್ರದೇಶ ಘಟಕದ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಉತ್ತರ ಪ್ರದೇಶ ಪಂಚಾಯತ್ ರಾಜ್ ಸಚಿವ ಭೂಪೇಂದ್ರ ಚೌಧರಿ ಅವರು ಮಂಗಳವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಇಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕಿರುವ ಚೌಧರಿ, "ಭಾರತೀಯ ಜನತಾ ಪಕ್ಷದ ರಾಜ್ಯ ಅಧ್ಯಕ್ಷರ ಜವಾಬ್ದಾರಿ ವಹಿಸಿಕೊಂಡ ಕಾರಣಕ್ಕಾಗಿ ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮೊದಲ ಮತ್ತು ಎರಡನೇ ಅವಧಿಯಲ್ಲಿ ರಾಜ್ಯ ಸಚಿವ(ಸ್ವತಂತ್ರ ಉಸ್ತುವಾರಿ) ಮತ್ತು ಕ್ಯಾಬಿನೆಟ್ ದರ್ಜೆ ಮಂತ್ರಿಯಾಗಿ ರಾಜ್ಯದ ಜನರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

"ಕಾಲಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡಿದ ಮಾನ್ಯ ಮುಖ್ಯಮಂತ್ರಿಗಳಿಗೆ(ಯೋಗಿ ಆದಿತ್ಯನಾಥ್)ಮತ್ತು ಅನೇಕ ಸಂದರ್ಭಗಳಲ್ಲಿ ಸ್ಫೂರ್ತಿದಾಯಕ ಮಾರ್ಗದರ್ಶನ ಮಾಡಿದ ಗೌರವಾನ್ವಿತ ಪ್ರಧಾನಮಂತ್ರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು" ಎಂದು ಚೌಧರಿ ಬರೆದಿದ್ದಾರೆ.

ಕೆಲವು ವರದಿಗಳ ಪ್ರಕಾರ ಅವರು ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದ್ದಾರೆ.

ಇದಕ್ಕೂ ಮೊದಲು ಆಗಸ್ಟ್ 25 ರಂದು ಭೂಪೇಂದ್ರ ಸಿಂಗ್ ಚೌಧರಿ ಅವರನ್ನು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

SCROLL FOR NEXT