ಚಂಡೀಗಢ: ನಾಲ್ವರು ಮುಸುಕುಧಾರಿಗಳ ಗುಂಪೊಂದು ಮಂಗಳವಾರ ರಾತ್ರಿ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಗ್ರಾಮವೊಂದರಲ್ಲಿ ಚರ್ಚ್‌ಗೆ ನುಗ್ಗಿ ಪಿಯೆಟಾ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಚರ್ಚ್‌ನಲ್ಲಿದ್ದ ಕಾರಿಗೆ ಬೆಂಕಿ ಹಚ್ಚಿದ್ದಾರೆ.
ನಿನ್ನೆ ಮಧ್ಯರಾತ್ರಿ 12.30 ರ ಸುಮಾರಿಗೆ ತರ್ನ್ ತರನ್ ಜಿಲ್ಲೆಯ ಪಟ್ಟಿ ವಿಧಾನಸಭಾ ಕ್ಷೇತ್ರದ ಥಾಕರ್‌ಪುರ ಗ್ರಾಮದ ಮೂರು ಅಂತಸ್ತಿನ ಚರ್ಚ್‌ಗೆ ನುಗ್ಗಿದ ನಾಲ್ವರು ಮುಸುಕುಧಾರಿಗಳ ಗುಂಪು, ಬಂದೂಕು ತೋರಿಸಿ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನು ಓದಿ: ಪಂಜಾಬ್ ನಲ್ಲಿ ಪ್ರಧಾನಿ ಮೋದಿ ಭದ್ರತಾ ವೈಫಲ್ಯ; ಇದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ: ಸುಪ್ರೀಂ ಕೋರ್ಟ್
ಚರ್ಚ್‌ನ ಮೇಲಿನ ಮಹಡಿಗೆ ಹತ್ತಿ ಮಾತೆ ಮೇರಿ ಮತ್ತು ಏಸುಕ್ರಿಸ್ತರ ಪ್ರತಿಮೆಗಳನ್ನು ಧ್ವಂಸಗೊಳಿಸಿ, ಅವರ ತಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಹೊರಡುವ ಮುನ್ನ ಚರ್ಚ್ ಆವರಣದಲ್ಲಿ ನಿಲ್ಲಿಸಿದ್ದ ಕಾರಿಗೂ ಬೆಂಕಿ ಹಚ್ಚಿದ್ದಾರೆ.
ಭದ್ರತಾ ಸಿಬ್ಬಂದಿಯನ್ನು ಬಂದೂಕಿನಿಂದ ಒತ್ತೆಯಾಳಾಗಿಟ್ಟುಕೊಂಡ ಅಪರಿಚಿತ ವ್ಯಕ್ತಿಗಳು, ಚರ್ಚ್‌ನ ಮುಂಭಾಗದಲ್ಲಿದ್ದ ಪಿಯೆಟಾ ಪ್ರತಿಮೆಯನ್ನು ಧ್ವಂಸಗೊಳಿಸಿ, ಅಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಅವರು "ನಾವು ಖಲಿಸ್ತಾನಿಗಳು" ಎಂಬ ಘೋಷಣೆ ಕೂಗುತ್ತಿದ್ದರು ಎನ್ನಲಾಗಿದೆ.
ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಕ್ರೈಸ್ತ ಸಮುದಾಯದವರು ಚರ್ಚ್ ಮುಂದೆ ಜಮಾಯಿಸಿ ಧರಣಿ ನಡೆಸಿದರು.
"ಸಮಾಜ ವಿರೋಧಿಗಳು ಏಸುವಿನ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಮತ್ತು ಚರ್ಚ್‌ನಲ್ಲಿದ್ದ ಕಾರಿಗೆ ಬೆಂಕಿ ಹಚ್ಚಿದ್ದಾರೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ" ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆರ್ ಎಸ್ ಧಿಲ್ಲೋನ್ ಅವರು ತಿಳಿಸಿದ್ದಾರೆ.