ದೇಶ

ಮತ್ತೆ ತೃತೀಯರಂಗಕ್ಕೆ ಜೀವ ನೀಡುವ ಯತ್ನ; ಪಾಟ್ನದಲ್ಲಿ ನಿತೀಶ್-ಕೆಸಿಆರ್ ಭೇಟಿ

Srinivas Rao BV

ಪಾಟ್ನ: ಬಿಹಾರದ ರಾಜಕೀಯದಲ್ಲಿ ಅಸ್ಥಿರತೆಯ ನಡುವೆಯೇ ಪಾಟ್ನದಲ್ಲಿ ಸಿಎಂ ನಿತೀಶ್ ಕುಮಾರ್ ಹಾಗೂ ತೆಲಂಗಾಣ ಸಿಎಂ ಕೆಸಿಆರ್ ಭೇಟಿಯಾಗಿದ್ದಾರೆ. ಈ ಭೇಟಿಯಲ್ಲಿ ಬಿಹಾರದ ಉಪಮುಖ್ಯಮಂತ್ರಿ, ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಸಹ ಭಾಗಿಯಾಗಿದ್ದರು.  2024 ರ ಚುನಾವಣೆಯ ದೃಷ್ಟಿಯಿಂದ ತೃತೀಯ ರಂಗಕ್ಕೆ ಮತ್ತೆ ಜೀವ ನೀಡುವ ಪ್ರಯತ್ನ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಬಿಜೆಪಿಯ ವಿರುದ್ಧ ಸಂಯುಕ್ತ ರಂಗವನ್ನು ಸೃಷ್ಟಿಸುವ ಉದ್ದೇಶದಿಂದ ಇಬ್ಬರೂ ಮುಖ್ಯಮಂತ್ರಿಗಳು ಮಹತ್ವದ ಮಾತುಕತೆ ನಡೆಸಲಿದ್ದು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. 

ಬಿಜೆಪಿಯನ್ನು ಮಣಿಸುವುದಕ್ಕಾಗಿ ದಕ್ಷಿಣ ಹಾಗೂ ಉತ್ತರ ಭಾರತೀಯ ನಾಯಕತ್ವದ ಒಗ್ಗೂಡುವಿಕೆ ಎಂದು ಜೆಡಿಯು ಎಂಎಲ್ ಸಿ ಒಬ್ಬರು ಹೇಳಿದ್ದಾರೆ. ಕೆಸಿಆರ್ ದಕ್ಷಿಣ ಭಾರತದ ಪ್ರಮುಖ ನಾಯಕರಾಗಿದ್ದು, ಬಿಜೆಪಿ ವಿರುದ್ಧದ ಧ್ವನಿಗಳಲ್ಲಿ ಮುಖ್ಯರಾಗಿದ್ದಾರೆ. ನಿತೀಶ್ ಕುಮಾರ್ ಅವರಲ್ಲಿ ವಿಪಕ್ಷಗಳು ಹೊಸ ಆಶಾಕಿರಣವನ್ನು ನೋಡುತ್ತಿದೆ, ಈ ಇಬ್ಬರೂ ನಾಯಕರ ಭೇಟಿ ರಾಷ್ಟ್ರ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ ಎಂದು ಜೆಡಿಯು ಎಂಎಲ್ ಸಿ ಹೇಳಿದ್ದಾರೆ. 

ಆರ್ ಜೆಡಿಯ ಉಪಾಧ್ಯಕ್ಷ ಶಿವಾನಂದ ತಿವಾರಿಯೂ ಜೆಡಿಯು ನಡೆಯನ್ನು ಬೆಂಬಲಿಸಿದ್ದಾರೆ. ನಿತೀಶ್ ಕುಮಾರ್-ಕೆಸಿಆರ್ ಭೇಟಿ ಖಂಡಿತವಾಗಿಯೂ ಮಹತ್ವದ್ದಾಗಿದೆ. ವಿಪಕ್ಷಗಳ ಒಗ್ಗಟ್ಟಿಗೆ ಇಬ್ಬರೂ ನಾಯಕರು ಅಗತ್ಯವಾಗಿದ್ದಾರೆ. ಎನ್ ಡಿಎಯಿಂದ ನಿತೀಶ್ ಹೊರಬಂದಿರುವುದು ಬಿಜೆಪಿಗೆ ಇತ್ತೀಚಿನ ದಿನಗಳಲ್ಲಿ ಅತಿ ದೊಡ್ಡ ಹೊಡೆತ ಎಂದು ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

2024 ರ ಲೋಕಸಭಾ ಚುನಾವಣೆ ನಿತೀಶ್ ಕುಮಾರ್-ನರೇಂದ್ರ ಮೋದಿ ನಡುವಿನ ಸ್ಪರ್ಧೆಯಾಗಿರಲಿದೆ, ಎಲ್ಲಾ ಪಕ್ಷಗಳೂ ನಿತೀಶ್ ಕುಮಾರ್ ಅವರ ಹೆಸರನ್ನು ವಿಪಕ್ಷ ನಾಯಕನ ಸ್ಥಾನಕ್ಕೆ ಒಪ್ಪಲಿವೆ ಎಂದು ಆರ್ ಜೆಡಿ ವಕ್ತಾರ ಶಕ್ತಿ ಸಿಂಗ್ ಯಾದವ್ ಹೇಳಿದ್ದಾರೆ. 

ಕೆಸಿಆರ್-ಜೆಡಿಯು ನಾಯಕ ನಿತೀಶ್ ಕುಮಾರ್ ಭೇಟಿಯನ್ನು ಬಿಜೆಪಿಯ ನಾಯಕ ಸುಶೀಲ್ ಕುಮಾರ್ ಮೋದಿ, ಇಬ್ಬರು ಹಗಲು ಕನಸು ಕಾಣುವ ನಾಯಕರ ಭೇಟಿ ಇದಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

SCROLL FOR NEXT