ದೇಶ

ಜಾರ್ಖಂಡ್: ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್‌ಗೆ ಸೇರಿದ 88.77 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಇಡಿ

Lingaraj Badiger

ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಅಮಾನತುಗೊಂಡ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್‌ ಅವರಿಗೆ ಸೇರಿದ ರಾಂಚಿಯಲ್ಲಿರುವ 88.77 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ಜಪ್ತಿ ಮಾಡಿದೆ. 

ಎಮ್‌ಜಿಎನ್‌ಆರ್‌ಇಜಿಎ ಹಣದ ದುರುಪಯೋಗ ಮತ್ತು ಇತರ ಆರೋಪಗಳಿಗೆ ಸಂಬಂಧಿಸಿದಂತೆ ಮೇ 11 ರಂದು ಸುಮಾರು 15 ಗಂಟೆಗಳ ಕಾಲ ವಿಚಾರಣೆಯ ನಂತರ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಪೂಜಾ ಸಿಂಘಾಲ್ ಅವರನ್ನು ಇಡಿ ಬಂಧಿಸಿತ್ತು.

2000 ಬ್ಯಾಚ್‌ನ ಐಎಎಸ್ ಅಧಿಕಾರಿ ಪೂಜಾಗೆ ಸೇರಿದ 88.77 ಕೋಟಿ ರೂ ಮೌಲ್ಯದ ಸ್ಥಿರ ಆಸ್ತಿಗಳನ್ನು ಇಡಿ ಜಪ್ತಿ ಮಾಡಿದೆ. ಜಪ್ತಿ ಮಾಡಿದ ಆಸ್ತಿಗಳಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಅಂದರೆ ಪಲ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಒಂದು ಡಯಾಗ್ನೋಸ್ಟಿಕ್ ಸೆಂಟರ್ ಅಂದರೆ ಪಲ್ಸ್ ಡಯಾಗ್ನೋಸ್ಟಿಕ್ ಮತ್ತು ಇಮ್ಯಾಜಿನಿಂಗ್ ಸೆಂಟರ್ ಹಾಗೂ ರಾಂಚಿಯಲ್ಲಿರುವ ಎರಡು ನಿವೇಶನಗಳು ಸೇರಿವೆ ಎಂದು ಪ್ರಕಟಣೆ ತಿಳಿಸಿದೆ.

2008 ಮತ್ತು 2011 ರ ನಡುವೆ 18.06 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕಿರಿಯ ಎಂಜಿನಿಯರ್ ರಾಮ್ ಬಿನೋದ್ ಪ್ರಸಾದ್ ಸಿನ್ಹಾ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳವು 2017 ರಲ್ಲಿ ದಾಖಲಿಸಿದ ಎಫ್‌ಐಆರ್ ಅನ್ನು ಆಧರಿಸಿ ಇಡಿ ಪೂಜಾ ಸಿಂಘಾಲ್ ವಿರುದ್ಧ ತನಿಖೆ ನಡೆಸುತ್ತಿದೆ. ತರುವಾಯ, ಇಡಿ ಸಿನ್ಹಾಗೆ ಸೇರಿದ 4.8 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು ಮತ್ತು 2020ರಲ್ಲಿ ಅವರ ವಿರುದ್ಧ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿತು. ತನಿಖೆ ಸಮಯದಲ್ಲಿ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಹೆಸರು ಕೂಡ ಕೇಳಿಬಂದಿತ್ತು.

SCROLL FOR NEXT