ದೇಶ

ಮುಂಬೈ: ಕೊರಿಯನ್ ಮಹಿಳಾ ಯೂಟ್ಯೂಬರ್ ಗೆ ರಸ್ತೆಯಲ್ಲಿ ಕಿರುಕುಳ, ಇಬ್ಬರ ಬಂಧನ; ವಿಡಿಯೋ ವೈರಲ್

Srinivasamurthy VN

ಮುಂಬೈ: ವಾಣಿಜ್ಯ ನಗರಿ ಮುಂಬೈಗೆ ಆಗಮಿಸಿದ್ದ ದಕ್ಷಿಣ ಕೊರಿಯಾದ ಯೂಟ್ಯೂಬರ್ (South Korean YouTuber)ಗೆ ಕೆಲ ಪುಂಡರು ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಖಾರ್ ನಲ್ಲಿ(Khar) ಕೊರಿಯಾದ ಮಹಿಳಾ ಯೂಟ್ಯೂಬರ್ ನೇರ ಪ್ರಸಾರ ಮಾಡುವಾಗ ಆಕೆಯ ಬಳಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯನ್ನು ಬಲವಂತವಾಗಿ ಬೈಕ್ ನಲ್ಲಿ ಕೂರಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಓರ್ವ ಪುಂಡ ಆಕೆಗೆ ಮುತ್ತು ಕೊಡುವಂತೆ ಬಲವಂತ ಮಾಡಿದ್ದು ಇದರಿಂದ ವಿಚಲಿತಳಾದ ಆಕೆ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೂ ಬಿಡದ ಆತ ಆಕೆಯನ್ನು ಬೈಕ್ ಮೇಲೆ ಕೂರುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಆಕೆ ಆತನಿಂದ ತಪ್ಪಿಸಿಕೊಂಡು ಮುಂದಕ್ಕೆ ಹೋಗಿದ್ದು, ಆಕೆಯನ್ನು ಮತ್ತೆ ಹಿಂಬಾಲಿಸಿದ ಇಬ್ಬರು ಡ್ರಾಪ್ ಮಾಡುತ್ತೇನೆ ಬಾ ಎಂದು ಕೂಗುತ್ತಾರೆ. ಆದರೆ, ಆ ಮಹಿಳೆ ಅದನ್ನು ನಿರಾಕರಿಸಿದ್ದು, ನನ್ನ ಮನೆ ಸಮೀಪದಲ್ಲಿಯೇ ಇದೆ.. ನಾನು ಹೋಗುತ್ತೇನೆ ಎನ್ನುತ್ತಾಳೆ. ಬಳಿಕ ಅವರು ಮುಂದಿನ ಸಾರಿ ಭೇಟಿಯಾಗೋಣ ಎಂದು ಹೇಳಿದ್ದಾರೆ. 

ಅದಕ್ಕೆ ಆಕೆ ಮತ್ತೆ ಭೇಟಿಯಾಗೋಣ ಎಂದು ಹೇಳಿ ಮುಂದಕ್ಕೆ ಹೋಗುತ್ತಾಳೆ. ಈ ಘಟನೆ ಬಳಿಕ ಮಹಿಳಾ ಯೂಟ್ಯೂಬರ್ ವಿಚಲಿತಳಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. 

ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೊಬೀನ್ ಚಾಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಸದ್ರೇಲಂ ಅನ್ಸಾರಿ ಎಂದು ಗುರುತಿಸಲಾಗಿದೆ.   

ಆ ವಿಡಿಯೊವನ್ನು ಮತ್ತೊಮ್ಮೆ ಟ್ವೀಟ್ ಮಾಡಿರುವ ಆ ಮಹಿಳೆ, ಆರೋಪಿಯೊಂದಿಗೆ ಮತ್ತೊಬ್ಬ ವ್ಯಕ್ತಿಯೂ ಇದ್ದುದರಿಂದ ಪರಿಸ್ಥಿತಿ ಉಲ್ಬಣಗೊಳ್ಳದಂತೆ ನಾನು ಪ್ರಯತ್ನಿಸಿದೆ ಎಂದು ಬರೆದುಕೊಂಡಿದ್ದಾಳೆ.

“ಕಳೆದ ರಾತ್ರಿ ನಾನು ನೇರ ಪ್ರಸಾರ ಮಾಡುತ್ತಿದ್ದಾಗ ಓರ್ವ ವ್ಯಕ್ತಿ ನನಗೆ ಕಿರುಕುಳ ನೀಡಿದ. ಆತ ತನ್ನ ಇನ್ನೊಬ್ಬ ಗೆಳೆಯನೊಂದಿಗೆ ಇದ್ದುದರಿಂದ ಪರಿಸ್ಥಿತಿಯು ವಿಷಮಿಸದಂತೆ ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಕೆಲವರು ನಾನು ತೀರಾ ಆತ್ಮೀಯವಾಗಿ ಮಾತುಕತೆ ನಡೆಸುತ್ತಿದ್ದುದೇ ಘಟನೆಗೆ ಕಾರಣವೆಂದು ಹೇಳಿದ್ದಾರೆ. ಇದು ನಾನು ಮತ್ತೊಮ್ಮೆ ನೇರ ಪ್ರಸಾರ ಮಾಡುವ ಬಗ್ಗೆ ಮರುಚಿಂತನೆ ಮಾಡುವಂತೆ ಮಾಡಿದೆ” ಎಂದು ಆಕೆ ಹೇಳಿದ್ದಾಳೆ.

SCROLL FOR NEXT