ದೇಶ

ಗಣರಾಜ್ಯೋತ್ಸವ ದಿನದಂದು ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಭಾರತ್ ಜೋಡೋ ಯಾತ್ರೆ ಕೊನೆಗೊಳಿಸಲು ಕಾಂಗ್ರೆಸ್ ನಿರ್ಧಾರ

Ramyashree GN

ನವದೆಹಲಿ: ಭಾರತ್ ಜೋಡೋ ಯಾತ್ರೆಯನ್ನು ವಿಶೇಷ ದಿನದಂದು ಕೊನೆಗೊಳಿಸಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ. ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆಯು ಸುಮಾರು 3500 ಕಿ.ಮೀ ದೂರವನ್ನು ಕ್ರಮಿಸುವ ಮೂಲಕ ಜನವರಿ 26 ರಂದು ಕಾಶ್ಮೀರದಲ್ಲಿ ಕೊನೆಗೊಳಿಸುವಂತೆ ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ವಾಸ್ತವವಾಗಿ, 2023ರ ಫೆಬ್ರುವರಿ 20 ರಂದು ಶ್ರೀನಗರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಕಾಂಗ್ರೆಸ್ ಈ ಯಾತ್ರೆಯನ್ನು ಕೊನೆಗೊಳಿಸಲಿದೆ ಎನ್ನಲಾಗಿತ್ತು. ಆದರೆ, ಈಗ ಹೊಸ ಯೋಜನೆಯ ಅಡಿಯಲ್ಲಿ, ರಾಹುಲ್ ಗಾಂಧಿ ಅವರು ಗಣರಾಜ್ಯ ದಿನದಂದು ಶ್ರೀನಗರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ತಮ್ಮ ಯಾತ್ರೆಯನ್ನು ಮುಕ್ತಾಯಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಮೂಲಗಳ ಪ್ರಕಾರ, ಜನವರಿ 26ರ ನಂತರ ಫೆಬ್ರುವರಿ 7ರ ಮೊದಲು ಕಾಂಗ್ರೆಸ್‌ನ ಸಮಗ್ರ ಅಧಿವೇಶನವೂ ನಡೆಯಲಿದ್ದು, ಅದರಲ್ಲಿ ಕಾಂಗ್ರೆಸ್ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಅನುಮೋದಿಸಲಾಗುತ್ತದೆ. ನಂತರ ಹೊಸ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗುತ್ತದೆ. ಆ ಬೆನ್ನಲ್ಲೇ ಬಹುಕಾಲದಿಂದ ಮುಂದೂಡಲಾಗಿದ್ದ ಕಾಂಗ್ರೆಸ್ ಸಂಘಟನೆಯಲ್ಲೂ ಮಹತ್ತರ ಬದಲಾವಣೆಯಾಗಲಿದೆ. ಡಿಸೆಂಬರ್ 4 ರಂದು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಸ್ಟೀರಿಂಗ್ ಕಮಿಟಿ ಸಭೆಯನ್ನು ಕರೆಯಲಾಗುವುದು.

ಸೆಪ್ಟೆಂಬರ್ 7ಕ್ಕೆ ಕನ್ಯಾಕುಮಾರಿಯಿಂದ ಆರಂಭವಾಗಿರುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯು 3,570 ಕಿ.ಮೀ. ದೂರ ಕ್ರಮಿಸುವ ಮೂಲಕ ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ. ಈ ಯಾತ್ರೆಯು ಐದು ತಿಂಗಳ ಅವಧಿಯಲ್ಲಿ 12 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹಾದು ಹೋಗುತ್ತದೆ ಎಂದು ಹೇಳಲಾಗಿತ್ತು. ಈಗ ಯಾತ್ರೆ ಮಧ್ಯ ಪ್ರದೇಶದಲ್ಲಿದ್ದು, ಬಳಿಕ ಡಿಸೆಂಬರ್ 4ಕ್ಕೆ ರಾಜಸ್ಥಾನಕ್ಕೆ ಪ್ರವೇಶಿಸಲಿದೆ.

SCROLL FOR NEXT