ದೇಶ

ರಾಜಸ್ಥಾನ: ಗ್ಯಾಂಗ್ ಸ್ಟಾರ್ ರಾಜು ಥೇಟ್  ಹತ್ಯೆ ಪ್ರಕರಣ, ಐವರು ಆರೋಪಿಗಳ ಬಂಧನ

Nagaraja AB

ಜೈಪುರ: ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ನಡೆದಿದ್ದ ಗ್ಯಾಂಗ್ ಸ್ಟಾರ್ ರಾಜು ಥೇಟ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಶನಿವಾರ ಥೇಟ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಸಂದರ್ಭ ಕೋಚಿಂಗ್ ಸಂಸ್ಥೆಯೊಂದರಲ್ಲಿ ಓದುತ್ತಿದ್ದ ಮಗಳನ್ನು ಭೇಟಿಯಾಗಲು ತೆರಳಿದ್ದ ತಾರಾಚಂದ್ ಕಡ್ವಾಸರ ಎಂಬ ವ್ಯಕ್ತಿ ಕೂಡ ಗುಂಡು ತಗುಲಿ ಸಾವನ್ನಪ್ಪಿದ್ದ.  ಥೇಟ್  ಆಪ್ತ ಎಂದು ಭಾವಿಸಿ ಆತನ ಮೇಲೂ ಆರೋಪಿಗಳು ಗುಂಡು ಹಾರಿಸಿದ್ದರು,  ಹತ್ಯೆ ನಂತರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎಂದು ಫೇಸ್‌ಬುಕ್‌ನಲ್ಲಿ ಹೇಳಿಕೊಂಡ ವ್ಯಕ್ತಿಯೊಬ್ಬ ಹತ್ಯೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದ. ಆದರೆ ನಂತರ ಅದನ್ನು ಅಳಿಸಿ ಹೊಸದನ್ನು ಪೋಸ್ಟ್ ಮಾಡಿದ್ದ. 

ಪೊಲೀಸರ ಪ್ರಕಾರ  ರಾಜು ಥೇಟ್ 30 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದು, 2017ರಲ್ಲಿ ಎನ್ ಕೌಂಟರ್ ನಲ್ಲಿ ಕೊಲ್ಪಲ್ಪಟ್ಟ ಕ್ರಿಮಿನಲ್ ಆನಂದ್ ಪಾಲ್ ಸಿಂಗ್ ಎದುರಾಳಿಯಾಗಿದ್ದ. ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದು ಐಶಾರಾಮಿ ಜೀವನ ನಡೆಸುತ್ತಿದ್ದ, ರಾಜಕೀಯ ಸೇರುವ ಮಹಕ್ವಾಕಾಂಕ್ಷೆ ಇಟ್ಟುಕೊಂಡಿದ್ದ ಎನ್ನಲಾಗಿದೆ. 

ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್,  ನಿನ್ನೆಯ ಸಿಕಾರ್‌ನಲ್ಲಿ ನಡೆದ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಶಸ್ತ್ರಾಸ್ತ್ರಗಳು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ತ್ವರಿತ ವಿಚಾರಣೆ ನಡೆಸಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

SCROLL FOR NEXT