ದೇಶ

ಜಿ-20 ಶೃಂಗಸಭೆಯ ಕಾರ್ಯತಂತ್ರಗಳನ್ನು ಅಂತಿಮಗೊಳಿಸಲು ಸರ್ವಪಕ್ಷ ಸಭೆ ಕರೆಯಲಿದೆ ಕೇಂದ್ರ ಸರ್ಕಾರ

Ramyashree GN

ನವದೆಹಲಿ: ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತ ಆಯೋಜಿಸಲಿರುವ ಜಿ-20 ಶೃಂಗಸಭೆಗೆ ಸಲಹೆಗಳನ್ನು ಕೋರಲು, ಚರ್ಚಿಸಲು ಮತ್ತು ಕಾರ್ಯತಂತ್ರಗಳನ್ನು ಅಂತಿಮಗೊಳಿಸಲು ಕೇಂದ್ರವು ಸೋಮವಾರ ಸರ್ವಪಕ್ಷ ಸಭೆಯನ್ನು ಕರೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರುವ ಸಭೆಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಸುಮಾರು 40 ಪಕ್ಷಗಳ ಅಧ್ಯಕ್ಷರನ್ನು ಆಹ್ವಾನಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಭಾರತವು ಡಿಸೆಂಬರ್ 1 ರಂದು ಅಧಿಕೃತವಾಗಿ ಜಿ-20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಈ ಬಾರಿ ಅಧ್ಯಕ್ಷನಾಗಿರುವ ಭಾರತವು ದೇಶದಲ್ಲಿ ಹಲವಾರು ಜಿ20 ಸಭೆಗಳನ್ನು ಆಯೋಜಿಸಲಿದೆ. ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತ, ಕಛ್, ಸೂರತ್‌, ಹೈದರಾಬಾದ್ ಸೇರಿ 15 ನಗರಗಳಲ್ಲಿ ಈ ಸಭೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಶೃಂಗಸಭೆಯನ್ನು ಮುಂದಿನ ವರ್ಷ ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ಆಯೋಜಿಸಲಾಗುತ್ತದೆ.

ಭಾನುವಾರದ ನಂತರ ದೆಹಲಿಗೆ ಆಗಮಿಸಲಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆದಾಗ್ಯೂ, ಅವರು ತೃಣಮೂಲ ಕಾಂಗ್ರೆಸ್ ಅಧ್ಯಕ್ಷರಾಗಿ ಸಭೆಯಲ್ಲಿ ಭಾಗವಹಿಸುತ್ತಾರೆಯೇ ಹೊರತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಲ್ಲ ಎಂದು ಬ್ಯಾನರ್ಜಿ ಹೇಳಿದ್ದಾರೆ.

2022ರಲ್ಲಿ ಇಂಡೊನೇಷ್ಯಾ ಅಧ್ಯಕ್ಷತೆ ವಹಿಸಿತ್ತು. ಈ ತಿಂಗಳ ಆರಂಭದಲ್ಲಿ ನಡೆದ ಬಾಲಿ ಶೃಂಗಸಭೆಯಲ್ಲಿ ಮುಂಬರುವ ವರ್ಷಕ್ಕೆ ಜಿ20 ಅಧ್ಯಕ್ಷ ಸ್ಥಾನವನ್ನು ಇಂಡೋನೇಷ್ಯಾ ಭಾರತಕ್ಕೆ ಹಸ್ತಾಂತರಿಸಿತ್ತು ಮತ್ತು ಇದು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಹೆಮ್ಮೆಯ ವಿಷಯ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ವಿಶ್ವದ 20 ದೇಶಗಳು (19+ ಐರೋಪ್ಯ ಒಕ್ಕೂಟ) ಸೇರಿ ರಚಿಸಿಕೊಂಡ ಒಕ್ಕೂಟವೇ ಜಿ20. ಪ್ರಪಂಚದ ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ವೇದಿಕೆ ಇದಾಗಿದೆ.

ಇದು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಯುಎಸ್ ಮತ್ತು ಯುರೋಪಿಯನ್ ಯೂನಿಯನ್ ಅನ್ನು ಒಳಗೊಂಡಿದೆ.

ಆಯಾ ವರ್ಷದಲ್ಲಿ ಅಧ್ಯಕ್ಷತೆ ವಹಿಸಿಕೊಳ್ಳಲಿರುವ ದೇಶವು, ಆ ವರ್ಷದಲ್ಲಿ ನಡೆಯುವ ಎಲ್ಲಾ ಜಿ20 ಸಭೆಗಳನ್ನು ಆಯೋಜಿಸಬೇಕಾಗುತ್ತದೆ. ಜಿ20ಯ ಅಧ್ಯಕ್ಷತೆಯ ಕ್ಯಾಲೆಂಡರ್‌ ಡಿಸೆಂಬರ್‌ನಿಂದ ಆರಂಭವಾಗಿ ನಂತರದ ವರ್ಷದ ನವೆಂಬರ್‌ನಲ್ಲಿ ಅಂತ್ಯವಾಗಲಿದೆ. ಈ ಅವಧಿಯಲ್ಲಿ ಹತ್ತಾರು ಸಭೆಗಳು ನಡೆಯುತ್ತದೆ. ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಶೃಂಗಸಭೆ ನಡೆಯುತ್ತದೆ. ಆ ಶೃಂಗಸಭೆಯಲ್ಲಿ, ನಂತರದ ವರ್ಷದ ಅಧ್ಯಕ್ಷ ದೇಶವನ್ನು ಹೆಸರಿಸಲಾಗುತ್ತದೆ ಮತ್ತು ಅಧ್ಯಕ್ಷನ ಅಧಿಕಾರದ ಸುತ್ತಿಗೆಯನ್ನು ಹಸ್ತಾಂತರಿಸಲಾಗುತ್ತದೆ.

SCROLL FOR NEXT