ದೇಶ

ಕಾಶ್ಮೀರಿ ಪಂಡಿತರನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ: ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ

Ramyashree GN

ಶ್ರೀನಗರ: ಕಾಶ್ಮೀರಿ ಪಂಡಿತರ ನೋವು ಮತ್ತು ಸಂಕಟವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ರಕ್ಷಿಸಲು ಸರ್ಕಾರ ವಿಫಲವಾಗಿದೆ ಎಂದು ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮಂಗಳವಾರ ಆರೋಪಿಸಿದ್ದಾರೆ.

ಅನಂತನಾಗ್ ಜಿಲ್ಲೆಯ ಖಾಜಿಗುಂಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರಿ ಪಂಡಿತರನ್ನು ರಕ್ಷಿಸುವಲ್ಲಿ ಈ ಸರ್ಕಾರ ವಿಫಲವಾಗಿದೆ. ಅದು ತನ್ನ ಸ್ವಂತ ಲಾಭಕ್ಕಾಗಿ ಸಮುದಾಯದ ನೋವು ಮತ್ತು ಸಂಕಟಗಳನ್ನು ಮಾತ್ರ ಬಳಸಿಕೊಳ್ಳುತ್ತಿದೆ. ಅವರ ಸಮಸ್ಯೆಗಳ ಬಗ್ಗೆ ಇದು ಗಂಭೀರವಾಗಿಲ್ಲ ಎಂದು ಹೇಳಿದರು.

ಕಾಶ್ಮೀರದಲ್ಲಿ ಪೋಸ್ಟ್ ಮಾಡಲಾದ ಕಾಶ್ಮೀರಿ ಪಂಡಿತ್ ಉದ್ಯೋಗಿಗಳ ಪಟ್ಟಿಯ ಸೋರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅಂತಹ ಮಾಹಿತಿಯನ್ನು ಸಾರ್ವಜನಿಕಗೊಳಿಸುತ್ತಿರುವುದು ದುರದೃಷ್ಟಕರ. ಕೇಂದ್ರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದರೂ, ಜಮ್ಮುವಿನಲ್ಲಿ ಕಳೆದ ಆರು ತಿಂಗಳಿನಿಂದ ರಸ್ತೆಗೆ ಬಿದ್ದಿರುವ ಕಾಶ್ಮೀರಿ ಪಂಡಿತರ ಸಮಸ್ಯೆಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.

'ಒಂದೆಡೆ ಕಾಶ್ಮೀರಿ ಪಂಡಿತರನ್ನು ಕೆಲಸಕ್ಕೆ ಹಾಜರಾಗುವಂತೆ ಕೇಳುತ್ತಿದ್ದರೆ, ಮತ್ತೊಂದೆಡೆ ಅವರ ವಿವರಗಳು ಸೋರಿಕೆಯಾಗುತ್ತಿವೆ. ಅದು ಹೇಗೆ ಸಂಭವಿಸಿತು ಎಂಬುದನ್ನು ಸರ್ಕಾರ ಜನರಿಗೆ ತಿಳಿಸಬೇಕು' ಎಂದು ಒತ್ತಾಯಿಸಿದರು.

ಇತ್ತೀಚೆಗೆ, ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಬ್ಲಾಗ್‌ವೊಂದರಲ್ಲಿ ಪ್ರಧಾನ ಮಂತ್ರಿಗಳ ಪುನರ್ವಸತಿ ಪರಿಹಾರದ ಅಡಿಯಲ್ಲಿ ತೊಡಗಿಸಿಕೊಂಡಿರುವ 56 ಕಾಶ್ಮೀರಿ ಪಂಡಿತ್ ಉದ್ಯೋಗಿಗಳ ಪಟ್ಟಿಯನ್ನು ಪ್ರಕಟಿಸಲಾಯಿತು ಮತ್ತು ಅವರ ಮೇಲೆ ದಾಳಿ ನಡೆಸುವ ಬಗ್ಗೆ ಎಚ್ಚರಿಕೆ ನೀಡಲಾಯಿತು.

ಪಟ್ಟಿ ಬಿಡುಗಡೆಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವ ಪಟ್ಟಿ ಅಧಿಕೃತವಾಗಿಲ್ಲದಿದ್ದರೂ, ಅದರ ಹಿಂದಿರುವ ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT