ದೇಶ

ರಾಜಸ್ಥಾನ ವಿಮಾನ ನಿಲ್ದಾಣದಿಂದ ಪಕ್ಷದ ವಕ್ತಾರ ಸಾಕೇತ್ ಗೋಖಲೆ ಬಂಧಿಸಿದ ಗುಜರಾತ್ ಪೊಲೀಸರು: ಟಿಎಂಸಿ

Manjula VN

ನವದೆಹಲಿ: ರಾಜಸ್ಥಾನ ವಿಮಾನ ನಿಲ್ದಾಣದಿಂದ ಗುಜರಾತ್ ಪೊಲೀಸರು ನಮ್ಮ ಪಕ್ಷದ ವಕ್ತಾರ ಸಾಕೇತ್ ಗೋಖಲೆ ಅವರನ್ನು ಬಂಧಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಮಂಗಳವಾರ ಹೇಳಿದೆ. ಆದರೆ, ಪೊಲೀಸರು ಈ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಟಿಎಂಬಿ ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸಂಸದ ಡೆರೆಕ್ ಒಬ್ರೇನ್ ಅವರು, ರಾಜಸ್ಥಾನ ವಿಮಾನ ನಿಲ್ದಾಣದಿಂದ ಗುಜರಾತ್ ಪೊಲೀಸರು ನಮ್ಮ ಪಕ್ಷದ ವಕ್ತಾರ ಸಾಕೇತ್ ಗೋಖಲೆ ಅವರನ್ನು ಬಂಧಇಸಿದ್ದಾರೆಂದು ಹೇಳಿದ್ದಾರೆ.

ಗೋಖಲೆ ಸೋಮವಾರ ರಾತ್ರಿ 9 ಗಂಟೆಗೆ ನವದೆಹಲಿಯಿಂದ ಜೈಪುರಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ವಿಮಾನ ನಿಲ್ದಾಣದಿಂದ ಇಳಿಯುತ್ತಿದ್ದಂತೆಯೇ ಗುಜರಾತ್ ಪೊಲೀಸರು ಅವರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿಸಿದ್ದಾರೆ.

ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಗೋಖಲೆ ಅವರು ತಮ್ಮ ತಾಯಿಗೆ ಕರೆ ಮಾಡಿದ್ದು, ಪೊಲೀಸರು ತನ್ನನ್ನು ಅಹಮದಾಬಾದ್‌ಗೆ ಕರೆದೊಯ್ಯುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಅಹಮದಾಬಾದ್ ತಲುಪುವುದಾಗಿ ಹೇಳಿಕೊಂಡಿದ್ದಾರೆಂದು ಹೇಳಿದ್ದಾರೆ.

2 ನಿಮಿಷಗಳ ಕಾಲ ಮಾತ್ರ ಫೋನ್ ನಲ್ಲಿ ಮಾತನಾಡಲು ಪೊಲೀಸರು ಸಾಕೇತ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದು, ನಂತರ ಅವರ ಬಳಿ ಫೋನ್ ಸೇರಿದಂತೆ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿಸಿದ್ದಾರೆ.

ಸಾಕೇತ್ ಬಂಧನದಿಂದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳನ್ನು ಮೌನಗೊಳಿಸಲು ಸಾಧ್ಯವಿಲ್ಲ. ಬಿಜೆಪಿಯು ಸೇಡಿನ ರಾಜಕೀಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಈ ನಡುವೆ ಜೈಪುರ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯ ಎಸ್‌ಎಚ್‌ಒ ದಿಗ್ಪಾಲ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಈ ಬಗ್ಗೆ ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

SCROLL FOR NEXT