ದೇಶ

ಮಹಾರಾಷ್ಟ್ರ-ಕರ್ನಾಟಕ ಗಡಿ ಘರ್ಷಣೆ ಬಗ್ಗೆ ಅಮಿತ್ ಶಾಗೆ ಮಾಹಿತಿ ನೀಡಿದ ಫಡ್ನವೀಸ್

Lingaraj Badiger

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದು, ಕಳೆದ ಒಂದು ವಾರದಿಂದ ಕರ್ನಾಟಕದೊಂದಿಗೆ ನಡೆಯುತ್ತಿರುವ ಗಡಿ ವಿವಾದಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಎರಡು ನೆರೆಯ ರಾಜ್ಯಗಳ ನಾಯಕರ ನಡುವಿನ ವಾಕ್ಸಮರ, ವಾಹನಗಳ ಮೇಲೆ ದಾಳಿ ಮತ್ತು ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಫಡ್ನವೀಸ್ ಅವರು ಕೇಂದ್ರ ಗೃಹ ಸಚಿವರಿಗೆ ಮಾಹಿತಿ ನೀಡಿದ್ದಾರೆ ಎಂದು ಮಹಾ ಡಿಸಿಎಂ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಕೆಲವು ದಿನಗಳಿಂದ ಘರ್ಷಣೆಗೆ ಕಾರಣವಾಗಿರುವ ದಶಕಗಳಷ್ಟು ಹಳೆಯದಾದ ಗಡಿ ವಿವಾದದ ಕುರಿತು ಮಹಾರಾಷ್ಟ್ರದ ನಿಲುವಿನ ಬಗ್ಗೆ ಉಪಮುಖ್ಯಮಂತ್ರಿಯವರ ಅಭಿಪ್ರಾಯವನ್ನು ಶಾ ತಾಳ್ಮೆಯಿಂದ ಆಲಿಸಿದರು ಎಂದು ಫಡ್ನವಿಸ್ ಅವರ ಕಚೇರಿ ಹೇಳಿದೆ. 

ಫಡ್ನವಿಸ್ ಅವರು ಮಂಗಳವಾರ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಇದನ್ನು ಶಾ ಅವರ ಗಮನಕ್ಕೆ ತಂದರು ಎಂದು ಮಹಾ ಡಿಸಿಎಂ ಕಚೇರಿ ಹೇಳಿದೆ.

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದೇನೆ. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಹಾರಾಷ್ಟ್ರದ ಐದು ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಮಂಗಳವಾರ ಬೆಳಗಾವಿಯ ಹಿರೇಬಾಗೇವಾಡಿ ಟೋಲ್‌ ಬಳಿ ಕಾರ್ಯಕರ್ತರು ವಾಹನಗಳ ನಂಬರ್‌ ಪ್ಲೇಟ್‌ಗೆ ಕಪ್ಪು ಮಸಿ ಬಳಿದಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಖುದ್ದು ಪರಿಶೀಲನೆ ನಡೆಸಿ, ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಹಾಗೂ ಮಹಾರಾಷ್ಟ್ರದಿಂದ ಬರುವ ಬಸ್‌ಗಳು ಮತ್ತು ಟ್ರಕ್‌ಗಳ ಭದ್ರತೆ ನೀಡುವುದಾಗಿ ತಿಳಿಸಿದ್ದಾರೆಂದು ಫಡ್ನವೀಸ್ ಹೇಳಿದ್ದರು.

SCROLL FOR NEXT