ದೇಶ

ಲೋಕಸಭೆಯಲ್ಲಿ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಪ್ರತಿಧ್ವನಿ; ಗೃಹ ಸಚಿವಾಲಯ ಮಧ್ಯಪ್ರವೇಶಿಸಬೇಕು ಎಂದ ಸುಪ್ರಿಯಾ ಸುಳೆ

Ramyashree GN

ನವದೆಹಲಿ: ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಗಡಿ ವಿವಾದದಲ್ಲಿ ಕೇಂದ್ರ ಗೃಹ ಸಚಿವಾಲಯ ಮಧ್ಯಪ್ರವೇಶಿಸುವಂತೆ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಬುಧವಾರ ಕೋರಿದ್ದಾರೆ.

ಶೂನ್ಯವೇಳೆಯಲ್ಲಿ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುಳೆ, ಎರಡೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ ಮಹಾರಾಷ್ಟ್ರದ ಜನರು ಪ್ರತಿದಿನ 'ಹೊಡೆತ' ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಕಳೆದ 10 ದಿನಗಳಲ್ಲಿ ಮಹಾರಾಷ್ಟ್ರವನ್ನು ಒಡೆಯಲು ಸಂಚು ರೂಪಿಸಲಾಗುತ್ತಿದೆ. (ಗೃಹ ಸಚಿವ) ಅಮಿತ್ ಶಾ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು' ಎಂದು ಅವರು ಒತ್ತಾಯಿಸಿದರು.

ಕರ್ನಾಟಕದ ಬಿಜೆಪಿ ಸಂಸದರು ಸುಪ್ರಿಯಾ ಸುಳೆ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ಈ ವಿಚಾರವು ನ್ಯಾಯಾಲಯದ ಅಧೀನದಲ್ಲಿದೆ ಎಂದು ಹೇಳಿದರು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಾತನಾಡಿ, 'ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಎರಡು ರಾಜ್ಯಗಳ ನಡುವಿನ ವಿಚಾರವಾಗಿದೆ' ಎಂದರು.

ಇದನ್ನು ವಿರೋಧಿಸಿ ಎನ್‌ಸಿಪಿ ಸದಸ್ಯರು ಸದನದಿಂದ ಹೊರನಡೆದರು.

ಗಡಿ ವಿವಾದ ಇತ್ತೀಚೆಗೆ ಉಭಯ ರಾಜ್ಯಗಳ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಭಾಷಾವಾರು ರಾಜ್ಯಗಳ ಮರುಸಂಘಟನೆಯ ನಂತರ ಗಡಿ ಸಮಸ್ಯೆಯು 1957 ರ ಹಿಂದಿನದು. ಮರಾಠಿ ಮಾತನಾಡುವ ಗಣನೀಯ ಜನಸಂಖ್ಯೆಯನ್ನು ಹೊಂದಿರುವ ಕಾರಣ ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬೆಳಗಾವಿಯ ಮೇಲೆ ಮಹಾರಾಷ್ಟ್ರ ಹಕ್ಕು ಸಾಧಿಸಿತು.

ಅಲ್ಲದೆ, ಕರ್ನಾಟಕ ರಾಜ್ಯದ ಭಾಗವಾಗಿರುವ ಮರಾಠಿ ಮಾತನಾಡುವ ಜನರಿರುವ 814 ಹಳ್ಳಿಗಳ ಮೇಲೂ ಹಕ್ಕು ಸಲ್ಲಿಸಿತು.

ಆದಾಗ್ಯೂ, ರಾಜ್ಯಗಳ ಮರುಸಂಘಟನೆ ಕಾಯಿದೆ ಮತ್ತು 1967 ರ ಮಹಾಜನ್ ಆಯೋಗದ ವರದಿಯ ಪ್ರಕಾರ ಭಾಷಾವಾರು ರೇಖೆಗಳ ಮೇಲೆ ಮಾಡಿದ ಗಡಿರೇಖೆಯನ್ನು ಕರ್ನಾಟಕವು ಅಂತಿಮವೆಂದು ಪರಿಗಣಿಸಿದೆ.

SCROLL FOR NEXT