ದೇಶ

ಬೀದಿ ನಾಯಿಗಳ ಹತ್ಯೆ: ಪಂಚಾಯಿತಿ ಅಧ್ಯಕ್ಷೆ, ಪತಿ ವಿರುದ್ಧ ಪ್ರಕರಣ ದಾಖಲಿಸಿದ ತಮಿಳುನಾಡು ಪೊಲೀಸರು

Ramyashree GN

ಚೆನ್ನೈ: ಬೀದಿನಾಯಿಗಳನ್ನು ಕೊಂದ ಆರೋಪದ ಮೇಲೆ ತಮಿಳುನಾಡಿನ ವಿರುದುನಗರ ಪೊಲೀಸರು ಶಂಕರಲಿಂಗಪುರದ ಪಂಚಾಯಿತಿ ಅಧ್ಯಕ್ಷೆ ಮತ್ತು ಆಕೆಯ ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಪ್ರದೇಶದಲ್ಲಿ ಸುಮಾರು 50 ಬೀದಿ ನಾಯಿಗಳನ್ನು ಕೊಂದು ಹೂತು ಹಾಕಲಾಗಿದೆ ಎಂದು ಪ್ರಾಣಿ ಕಾರ್ಯಕರ್ತೆಯೊಬ್ಬರು ಅಮಟೂರು ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೇನಕಾ ಗಾಂಧಿ ಸ್ಥಾಪಿಸಿದ ಪ್ರಾಣಿ ಹಕ್ಕುಗಳ ಸಂಘಟನೆಯಾದ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಸದಸ್ಯೆಯಾಗಿರುವ ಸಿ. ಸುನಿತಾ ಎಂಬುವವರು 50 ನಾಯಿಗಳನ್ನು ಕೊಂದು ಹೂಳಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಾಯಿತಿ ಅಧ್ಯಕ್ಷೆ ನಾಗಲಕ್ಷ್ಮಿ ಮತ್ತು ಅವರ ಪತಿ ಮೀನಾಚಿ ಸುಂದರಂ ಅವರು ನಾಯಿಗಳನ್ನು ಕೊಂದಿದ್ದಾರೆ ಎಂಬುದಕ್ಕೆ ಪುರಾವೆ ಸಿಕ್ಕಿದ ಮೇಲೆ ನಾನು ಅವರಿಗೆ ಕರೆ ಮಾಡಿದ್ದೇನೆ. ಸುಂದರಂ ಅವರು ನಾಯಿಗಳನ್ನು ಕೊಂದಿರುವುದಾಗಿ ಖಚಿತಪಡಿಸಿದ್ದಾರೆ ಎಂದರು.

30 ನಾಯಿಗಳ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಮಟೂರು ಪೊಲೀಸರು ಪಂಚಾಯಿತಿ ಅಧ್ಯಕ್ಷೆ ಮತ್ತು ಆಕೆಯ ಪತಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕಬ್ಬಿಣದ ಕೊಕ್ಕೆಗಳನ್ನು ಬಳಸಿ ನಾಯಿಗಳನ್ನು ಹಿಡಿದು ನಂತರ ಹೊಡೆದು ಸಾಯಿಸಲಾಗಿದೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಸುದ್ದಿಸಂಸ್ಥೆ ಐಎಎನ್ಎಸ್‌ಗೆ ತಿಳಿಸಿದ್ದಾರೆ.

ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ 1960ರ ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳು ಹೆಚ್ಚು ಕೊಳೆತ ಸ್ಥಿತಿಯಲ್ಲಿರುವುದರಿಂದ ಹೆಚ್ಚಿನವುಗಳ ಶವಪರೀಕ್ಷೆ ನಡೆಸಲಾಗಲಿಲ್ಲ. ಆದರೆ, ಕೆಲವು ನಾಯಿಗಳಿಗೆ ಇದನ್ನು ಮಾಡಲಾಯಿತು ಮತ್ತು ನಾಯಿಗಳನ್ನು ಹೊಡೆದು ಸಾಯಿಸಲಾಗಿದೆ ಎಂದು ಕಂಡುಬಂದಿದೆ ಎಂದು ಅಮಟೂರು ಪೊಲೀಸ್ ಠಾಣೆಯ ಅಧಿಕಾರಿಗಳು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

SCROLL FOR NEXT