ದೇಶ

ಗುಜರಾತ್ ಚುನಾವಣೆ: 45 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್, ಆ ಪೈಕಿ 43 ಜನ ಗೆಲುವು

Lingaraj Badiger

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಗೆಲುವು ಸಾಧಿಸಿರುವ ಆಡಳಿತರೂಢ ಬಿಜೆಪಿ, ಹಾಲಿ ಶಾಸಕರನ್ನು ಕೈಬಿಟ್ಟು 45 ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆ ಪೈಕಿ ಇಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲ ಜಯಭೇರಿ ಬಾರಿಸಿದ್ದಾರೆ.
          
ಆಡಳಿತ ವಿರೋಧಿ ಅಲೆ ಅಳಿಸಿ ಹಾಕಲು ಆಡಳಿತ ಪಕ್ಷ ಬಿಜೆಪಿ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 45 ಶಾಸಕರಿಗೆ ಟಿಕೆಟ್ ನಿರಾಕರಿಸಿತ್ತು. 45 ಹೊಸ ಮುಖಗಳ ಪೈಕಿ 43 ಜನ ಗೆಲುವು ಸಾಧಿಸಿದ್ದಾರೆ. ಹೆಚ್ಚು ಹೊಸ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಿದ್ದರಿಂದ ಬಿಜೆಪಿ ತಂತ್ರ ಫಲ ನೀಡಿದೆ.

ಇದನ್ನು ಓದಿ: ಬಿಎಂಸಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮತ 'ತಿನ್ನಲು' ಎಎಪಿ ಸ್ಪರ್ಧಿಸಬೇಕು: ಮಹಾ ಬಿಜೆಪಿ
        
ಬೊಟಾಡ್ ಮತ್ತು ವಘೋಡಿಯಾದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹೊಸ ಅಭ್ಯರ್ಥಿಗಳು ಆಮ್ ಆದ್ಮಿ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ್ದಾರೆ.
       
ಬೊಟಾಡ್‌ನಲ್ಲಿ ಬಿಜೆಪಿ ಹಾಲಿ ಶಾಸಕ ಹಾಗೂ ಮಾಜಿ ಇಂಧನ ಸಚಿವ ಸೌರಭ್ ಪಟೇಲ್ ಅವರನ್ನು ಕೈಬಿಟ್ಟು ಘನಶ್ಯಾಮ್ ವಿರಾನಿ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ವಿರಾನಿ ಅವರು ಎಎಪಿಯ ಉಮೇಶ್ ಮಕ್ವಾನಾ ವಿರುದ್ಧ 2,779 ಮತಗಳ ಕಡಿಮೆ ಅಂತರದಿಂದ ಸೋಲು ಅನುಭವಿಸಿದ್ದಾರೆ.
        
ವಡೋದರಾ ಜಿಲ್ಲೆಯ ವಘೋಡಿಯಾ ಕ್ಷೇತ್ರದಲ್ಲಿ ಹಾಲಿ ಶಾಸಕ ಮಧು ಶ್ರೀವಾಸ್ತವ್ ಬದಲಿಗೆ ಅಶ್ವಿನ್ ಪಟೇಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿತ್ತು. ಆರು ಬಾರಿ ಶಾಸಕರಾಗಿದ್ದ ಶ್ರೀವಾಸ್ತವ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

SCROLL FOR NEXT