ದೇಶ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ದೀಪಂಕರ್ ದತ್ತಾ ಪ್ರಮಾಣವಚನ ಸ್ವೀಕಾರ

Ramyashree GN

ನವದೆಹಲಿ: ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಂಕರ್‌ ದತ್ತಾ ಅವರು ಸೋಮವಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಬೆಳಿಗ್ಗೆ 10.36ಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ ಅವರು ಕೋರ್ಟ್‌ರೂಂ 1ರಲ್ಲಿ ಪ್ರಮಾಣ ವಚನ ಬೋಧಿಸಿದರು.

ನ್ಯಾಯಮೂರ್ತಿ ದತ್ತಾ ಅವರು, ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ದಿವಂಗತ ಸಲೀಲ್ ಕುಮಾರ್ ದತ್ತಾ ಅವರ ಪುತ್ರ ಹಾಗೂ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅಮಿತವ ರಾಯ್ ಅವರ ಸಂಬಂಧಿ.

ನ್ಯಾಯಮೂರ್ತಿ ದತ್ತಾ ಪ್ರಮಾಣ ವಚನ ಸ್ವೀಕಾರದೊಂದಿಗೆ, ಸಿಜೆಐ ಸೇರಿದಂತೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದ್ದು, 34 ಸದಸ್ಯ ಬಲವನ್ನು ಸುಪ್ರೀಂ ಕೋರ್ಟ್ ಹೊಂದಿದೆ.

ಭಾನುವಾರ ಕೇಂದ್ರ ಕಾನೂನು ಸಚಿವಾಲಯದ ನ್ಯಾಯಾಂಗ ಇಲಾಖೆಯು ಅವರ ನೇಮಕವನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ.ಫೆಬ್ರವರಿ 9, 1965 ರಂದು ಜನಿಸಿದ ನ್ಯಾಯಮೂರ್ತಿ ದತ್ತಾ ಅವರು ಈ ವರ್ಷ 57 ನೇ ವರ್ಷಕ್ಕೆ ಕಾಲಿಟ್ಟರು ಮತ್ತು 2030ರ ಫೆಬ್ರವರಿ 8 ರವರೆಗೆ ಅಧಿಕಾರಾವಧಿಯನ್ನು ಹೊಂದಿರುತ್ತಾರೆ.
ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ಆಗಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನ್ಯಾಯಮೂರ್ತಿ ಯು.ಯು. ಲಲಿತ್ (ಈಗ ನಿವೃತ್ತರಾಗಿದ್ದಾರೆ) ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರ ಹೆಸರನ್ನು ಶಿಫಾರಸು ಮಾಡಿತ್ತು.

2006ರ ಜೂನ್ 22ರಂದು ನ್ಯಾಯಮೂರ್ತಿ ದತ್ತಾ ಅವರನ್ನು ಕಲ್ಕತ್ತಾ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ಉನ್ನತೀಕರಿಸಲಾಗಿತ್ತು. ಅವರು 2020ರ ಏಪ್ರಿಲ್‌ 28ರಂದು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.

ಕಲ್ಕತ್ತಾ ಹೈಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಅವರು 1989 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪಡೆದಿದ್ದಾರೆ ಮತ್ತು ಅವರು 1989ರ ನವೆಂಬರ್ 16 ರಂದು ವಕೀಲರಾಗಿ ಸೇರಿಕೊಂಡರು.

SCROLL FOR NEXT