ದೇಶ

ಶಬರಿಮಲೆ ಭಕ್ತರ ಸಂಖ್ಯೆ ತೀವ್ರ ಹೆಚ್ಚಳ: ದಿನಕ್ಕೆ 90 ಸಾವಿರ ಭಕ್ತರಿಗಷ್ಟೇ ದರ್ಶನ ಅವಕಾಶ ಎಂದ ಆಡಳಿತ ಮಂಡಳಿ

Srinivasamurthy VN

ಪಥನಂತಿಟ್ಟ: ಹಿಂದೂಗಳ ಖ್ಯಾತ ಪವಿತ್ರ ಯಾತ್ರಾತಾಣ ಶಬರಿಮಲೆ (Sabarimala)ಯಲ್ಲಿ ಅಯ್ಯಪ್ಪ (Ayyappa Swamy) ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾದ ಹಿನ್ನಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ Travancore Devaswom Board (TDB) ದಿನಕ್ಕೆ 90 ಸಾವಿರ ಭಕ್ತರಿಗಷ್ಟೇ ದರ್ಶನ ಅವಕಾಶ ಎಂದು ಹೊಸ ಆದೇಶ ಹೊರಡಿಸಿದೆ.

ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ದಿನಕ್ಕೆ 90 ಸಾವಿರ ಮಂದಿ ಭಕ್ತರಿಗಷ್ಟೇ ದೇವರ ದರ್ಶನಕ್ಕೆ ಅವಕಾಶ ನೀಡಲು ಕೇರಳ ಸರ್ಕಾರ ಮತ್ತು ದೇಗುಲದ ಆಡಳಿತ ಮಂಡಳಿ ಸೋಮವಾರ ತೀರ್ಮಾನಿಸಿದೆ. ಇದೇ ವೇಳೆ ದೇವರ ದರ್ಶನ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗಿದ್ದು, ಇದರೊಂದಿಗೆ, ದೇವಾಲಯದ ಬಾಗಿಲುಗಳು ಭಕ್ತರಿಗಾಗಿ ದಿನಕ್ಕೆ 19 ಗಂಟೆಗಳ ಕಾಲ ಅಂದರೆ ಬೆಳಿಗ್ಗೆ 3 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 11.30 ರವರೆಗೆ ತೆರೆದಿರುತ್ತವೆ ಎಂದು TDB ಅಧ್ಯಕ್ಷ ಕೆ ಅನಂತಗೋಪಾಲನ್ ಮಾಹಿತಿ ನೀಡಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.

ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ‘ಅಷ್ಟಾಭಿಷೇಕ’ ಮತ್ತು ‘ಪುಷ್ಪಾಭಿಷೇಕ’ ಎಂಬ ವಿಶೇಷ ನೈವೇದ್ಯಗಳನ್ನು ಸೀಮಿತಗೊಳಿಸಲಾಗಿದೆ. ಹರಿವರಾಸನ ಪಠಣದ ಸಮಯದಲ್ಲಿ ಭಕ್ತರಿಗೆ ಎಲ್ಲಾ ಸರತಿ ಸಾಲುಗಳ ಮೂಲಕ ಹೋಗಲು ಅವಕಾಶ ನೀಡಲಾಗುವುದು. ‘ಸರಮಕುತಿ’ಯಿಂದ ‘ನಡಪಂಥಲ್’ವರೆಗೆ ನೀರು ಮತ್ತು ಬಿಸ್ಕತ್‌ಗಳನ್ನು ವಿತರಿಸಲಾಗುವುದು. ನಿಲಕ್ಕಲ್‌ನಲ್ಲಿ ಪಾರ್ಕಿಂಗ್‌ಗೆ ಹೆಚ್ಚಿನ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು ಮತ್ತು ತರಬೇತಿ ಪಡೆದ ಪೊಲೀಸರನ್ನು ‘ಪತಿನೆಟ್ಟಂ ಪಾಡಿ’ (18 ಪವಿತ್ರ ಮೆಟ್ಟಿಲುಗಳು) ನಲ್ಲಿ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದರ್ಶನಕ್ಕಾಗಿ ಈಗಾಗಲೇ 19,17,385 ಜನರು ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದಾರೆ ಮತ್ತು ಕಳೆದ ಭಾನುವಾರದವರೆಗೆ ಒಟ್ಟು 14,98,824 ಜನರು ದೇವಾಲಯಕ್ಕೆ ಭೇಟಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ ಎಂದು ಟಿಡಿಬಿ ಅಧ್ಯಕ್ಷರು ತಿಳಿಸಿದ್ದಾರೆ.

ಭಕ್ತರ ಸಂದಣಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಎಂದು ಕೇರಳ ಹೈಕೋರ್ಟ್ ಭಾನುವಾರ ಪಥನಂತ್ತಿಟ್ಟ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ ಬಳಿಕ ಸರ್ಕಾರವು ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗಿದೆ.
 

SCROLL FOR NEXT