ದೇಶ

ಟಿಆರ್ ಪಿ ರೇಟಿಂಗ್ ತಿರುಚಿದ ಪ್ರಕರಣ: ಬಾರ್ಕ್ ಮಾಜಿ ಸಿಇಒ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ

Nagaraja AB

ಲಖನೌ: ಟಿಆರ್ ಪಿ ರೇಟಿಂಗ್ ತಿರುಚಿದ ಆರೋಪಕ್ಕೆ ಸಂಬಂಧಿಸಿದಂತೆ ಬಾರ್ಕ್ ಸಂಸ್ಥೆಯ ಮಾಜಿ ಸಿಇಒ ಸುನೀಲ್ ಲುಲ್ಲಾ ವಿರುದ್ಧ ಸಿಬಿಐ ಜಾರ್ಜ್ ಶೀಟ್ ದಾಖಲಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಲಖನೌನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯವೊಂದರಲ್ಲಿ ಆರೋಪ ಪಟ್ಟಿ ಸಲ್ಲಿಸಿರುವ ಸಿಬಿಐ, ಲುಲ್ಲಾ ಬಾರ್ಕ್ ಸಂಸ್ಥೆಯ ಮುಖ್ಯಸ್ಥನಾಗಿದ್ದ ಅವಧಿಯಲ್ಲಿ ಟಿವಿ ಚಾನೆಲ್ ಗಳ ರೇಟಿಂಗ್ ನಲ್ಲಿ ತಿರುಚಲಾಗಿದೆ ಎಂದು ಆರೋಪಿಸಿದೆ. ಆದರೆ, ಈ ಆರೋಪಗಳನ್ನು ಲುಲ್ಲಾ ನಿರಾಕರಿಸಿದ್ದಾರೆ.  

ವಿಶೇಷ ನ್ಯಾಯಾಲಯ ಚಾರ್ಜ್ ಶೀಟ್ ನ್ನು ಇನ್ನೂ ಪರಿಗಣಿಸದ ಕಾರಣ ಅದರ ವಿವರಗಳನ್ನು ಹಂಚಿಕೊಳ್ಳಲು ಮೂಲಗಳು ನಿರಾಕರಿಸಿವೆ. ಐಪಿಸಿ ಸೆಕ್ಷನ್ 406( ನಂಬಿಕೆಯ ಉಲ್ಲಂಘನೆ) 420 ( ವಂಚನೆ) ಮತ್ತಿತರ ಅಡಿಯಲ್ಲಿ ಸಿಬಿಐ ಆರೋಪ ಮಾಡಿದೆ. ನ್ಯಾಯಾಲಯ ಇದೇ 15ಕ್ಕೆ  ಚಾರ್ಜ್ ಶೀಟ್ ಪರಿಗಣಿಸುತ್ತಿರುವ ಹಿನ್ನೆಲೆಯಲ್ಲಿ ಲುಲ್ಲಾಗೆ ಸಮನ್ಸ್ ನೀಡಿದೆ ಎಂದು ಅವರು ಹೇಳಿದರು.

ಸುನೀಲ್ ಲುಲ್ಲಾ ವೃತ್ತಿಜೀವನದಲ್ಲಿ ಉನ್ನತ ಪ್ರಾಮಾಣಿಕರಾಗಿದ್ದು, ಕಳಂಕವಿಲ್ಲದ ದಾಖಲೆಯನ್ನು ಹೊಂದಿದ್ದಾರೆ  ಅವರ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಸುಳ್ಳು. ಕಾನೂನಿನ ನಿಯಮದಲ್ಲಿ  ನಾವು ಸಂಪೂರ್ಣ ನಂಬಿಕೆ ಹೊಂದಿದ್ದು, ನ್ಯಾಯಾಲಯವನ್ನು ಗೌರವಿಸುವುದಾಗಿ ಲುಲ್ಲಾ ಪರ ವಕ್ತಾರರೊಬ್ಬರು ಹೇಳಿದ್ದಾರೆ. 

ಚಾನೆಲ್ ಅಥವಾ ಕಾರ್ಯಕ್ರಮದ ಟಿಆರ್ ಪಿ ಅಥವಾ ಟೆಲಿವಿಷನ್ ರೇಟಿಂಗ್ ಪಾಯಿಂಟ್‌ಗಳ ಆಧಾರದ ಮೇಲೆ ಏಜೆನ್ಸಿಗಳು ಜಾಹೀರಾತು ನೀಡುತ್ತವೆ. "ಬಾರ್-ಒ-ಮೀಟರ್" ಎಂದು ಕರೆಯಲ್ಪಡುವ ದೇಶದಾದ್ಯಂತ 45,000 ಕ್ಕೂ ಹೆಚ್ಚು ಮನೆಗಳಲ್ಲಿ ಸ್ಥಾಪಿಸಲಾದ ಸಾಧನವನ್ನು ಬಳಸಿಕೊಂಡು ಬಾರ್ಕ್ ದೇಶದಲ್ಲಿ ರೇಟಿಂಗ್ ಮಾಹಿತಿ ನೀಡುತ್ತದೆ. ಈ ಸಾಧನದಿಂದ ಮನೆಯ ಸದಸ್ಯರು ವೀಕ್ಷಿಸುವ ಪ್ರೋಗ್ರಾಂ ಅಥವಾ ಚಾನಲ್ ಕುರಿತು ಡೇಟಾ ಸಂಗ್ರಹಿಸಲಾಗುತ್ತದೆ. ಅದರ ಆಧಾರದ ಮೇಲೆ ಸಾಪ್ತಾಹಿಕ ರೇಟಿಂಗ್‌ ನೀಡಲಾಗುತ್ತದೆ.

ಜಾಹೀರಾತು ಕಂಪನಿಯ ಪ್ರವರ್ತಕರೊಬ್ಬರ ದೂರಿನ ಮೇರೆಗೆ ಲಕ್ನೋದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಸುನೀಲ್ ಲುಲ್ಲಾ ವಿರುದ್ಧ  ದಾಖಲಾಗಿದ್ದ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ಹಸ್ತಾಂತರಿಸಿದೆ. 

SCROLL FOR NEXT