ದೇಶ

ಜಾರ್ಖಂಡ್: 2016ರ ಶೂಟೌಟ್ ಪ್ರಕರಣ- ಕಾಂಗ್ರೆಸ್ ಶಾಸಕಿ ಮಮತಾ ದೇವಿ ಸೇರಿ 12 ಮಂದಿಗೆ ಐದು ವರ್ಷಗಳ ಜೈಲು ಶಿಕ್ಷೆ

Shilpa D

ಜಾರ್ಖಂಡ್: ಆರು ವರ್ಷಗಳ ಹಿಂದೆ ರಾಮಗಢದ ಗೋಲಾದಲ್ಲಿ ನಡೆದ ಇನ್‌ಲ್ಯಾಂಡ್ ಪವರ್ ಲಿಮಿಟೆಡ್‌ನ ಬಹಿರಂಗ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಂಸದ-ಶಾಸಕ ನ್ಯಾಯಾಲಯವು ಮಂಗಳವಾರ ಜಾರ್ಖಂಡ್ ಕಾಂಗ್ರೆಸ್ ಶಾಸಕಿ ಮಮತಾ ದೇವಿ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಗೋಲಾ ಶೂಟೌಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಹಜಾರಿಬಾಗ್ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ರಾಮಗಢ ಕಾಂಗ್ರೆಸ್​ ಶಾಸಕಿ ಮಮತಾ ದೇವಿಗೆ ಐಪಿಸಿ ಸೆಕ್ಷನ್ 307 ರಲ್ಲಿ 5 ವರ್ಷ ಜೈಲು ವಾಸ ಸೇರಿದಂತೆ 15 ಮಂದಿಗೆ ಶಿಕ್ಷೆಯನ್ನು ವಿಧಿಸಿದೆ.

ಹಜಾರಿಬಾಗ್ ನ್ಯಾಯಾಲಯದ ಆವರಣದಲ್ಲಿ ದಿನವಿಡೀ ಭಾರಿ ಗದ್ದಲವೇ ಏರ್ಪಟ್ಟಿತ್ತು. ಶಾಸಕಿಯ ಮಕ್ಕಳು, ಕುಟುಂಬಸ್ಥರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು. ಅಲ್ಲದೇ ಅವರೆಲ್ಲರೂ ಶಾಸಕಿಗಾಗಿ ಕಣ್ಣೀರು ಸುರಿಸಿದರು. ನ್ಯಾಯಾಲಯದ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು.

ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ನಡೆಯಬೇಕಾಗಿದ್ದ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಬಾರ್ ಅಸೋಸಿಯೇಶನ್ ಹಜಾರಿಬಾಗ್‌ನ ವಕೀಲ ಅಸ್ಮಾನ್ಜ್ ಬಿಸ್ವಾಸ್ ನಿನ್ನೆ ನಿಧನರಾಗಿದ್ದರು. ಹೀಗಾಗಿ ನಿನ್ನೆ ವಿಚಾರಣೆ ನಡೆದಿರಲಿಲ್ಲ.

2016ರ ಆಗಸ್ಟ್‌ನಲ್ಲಿ ಮಮತಾ ದೇವಿ ನೇತೃತ್ವದಲ್ಲಿ ಗ್ರಾಮಸ್ಥರು ಗೋಲಾದಲ್ಲಿರುವ ಇನ್‌ಲ್ಯಾಂಡ್ ಪವರ್ ಲಿಮಿಟೆಡ್ ಮುಚ್ಚುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದರು. ಇದು ಗುಂಪು ಹಿಂಸಾಚಾರಕ್ಕೆ ಕಾರಣವಾಗಿತ್ತು. ಪೊಲೀಸರು ಗುಂಪು ಚದುರಿಸಲು ಗುಂಡು ಹಾರಿಸಿದ್ದರು.

ಸರ್ಕಲ್ ಆಫೀಸರ್, ಬ್ಲಾಕ್ ಡೆವಲಪ್ಮೆಂಟ್ ಆಫೀಸರ್, ರಾಜ್ರಪ್ಪ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಹಾಗೂ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಆಗಿನ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ದಿನೇಶ್ ಪ್ರಸಾದ್ ಸೂರಿ ಅವರು ನೀಡಿದ ದೂರಿನ ಮೇರೆಗೆ ರಾಜ್ರಪ್ಪ ಪೊಲೀಸ್ ಠಾಣೆಯಲ್ಲಿ ಮಮತಾದೇವಿ, ಸ್ಥಳೀಯ ಫೈರ್‌ಬ್ರಾಂಡ್ ನಾಯಕ ರಾಜೀವ್ ಜೈಸ್ವಾಲ್ ಹಾಗೂ ಇತರರ ವಿರುದ್ಧ 2016ರಲ್ಲಿ ಪ್ರಕರಣ ದಾಖಲಿಸಲಾಗಿತ್ತು.

SCROLL FOR NEXT