ದೇಶ

ನಕಲಿ ಮದ್ಯ ದುರಂತ: ಬಿಹಾರದ ಇನ್ನೆರಡು ಜಿಲ್ಲೆಗಳಲ್ಲಿ ಮತ್ತೆ ಎಂಟು ಮಂದಿ ಸಾವು

Lingaraj Badiger

ಪಾಟ್ನಾ: ಮದ್ಯ ನಿಷೇಧಿಸಿರುವ ಬಿಹಾರದ ಸರನ್ ಜಿಲ್ಲೆಯಲ್ಲಿ 30 ಜನರ ಸಾವಿಗೆ ಕಾರಣವಾದ ನಕಲಿ ಮದ್ಯ ದುರಂತದ ಬೆನ್ನಲ್ಲೇ, ಇನ್ನೆರಡು ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವಿಸಿ ಮತ್ತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಸರನ್‌ಗೆ ಹೊಂದಿಕೊಂಡಿರುವ ಸಿವಾನ್ ಜಿಲ್ಲೆಯಲ್ಲಿ ಆರು ಜನ ಸಾವನ್ನಪ್ಪಿದರೆ, ಬೇಗುಸರಾಯಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಈ ಮಧ್ಯೆ, ಸರನ್ ಜಿಲ್ಲೆಯಲ್ಲಿ ಅಕ್ರಮವಾಗಿ ತಯಾರಿಸಿದ ಹಳ್ಳಿಗಾಡಿನ ಮದ್ಯವನ್ನು ಸೇವಿಸಿ ಸುಮಾರು 60 ಜನ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ.

ಸಿವಾನ್ ಜಿಲ್ಲೆಯ ಭಗವಾನ್‌ಪುರ ವಿಭಾಗದಲ್ಲಿ ಸಂಭವಿಸಿದ ಆರು ಸಾವುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಅವರು ತಿಳಿಸಿದ್ದಾರೆ.  ಅಲ್ಲದೆ "ಮದ್ಯ ಮಾರಾಟ ಮತ್ತು ಖರೀದಿಯಲ್ಲಿ ತೊಡಗಿರುವವರನ್ನು ಬಂಧಿಸಲು ನಾವು ಶೋಧ ನಡೆಸುತ್ತಿದ್ದೇವೆ" ಎಂದು ಕುಮಾರ್ ಹೇಳಿದ್ದಾರೆ.

ಇನ್ನು ಬೇಗುಸರಿ ಘಟನೆಯ ಕುರಿತು ಉಪ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಮೋಹನ್ ಪ್ರಸಾದ್ ಸುದ್ದಿಗಾರರೊಂದಿಗೆ ಮಾತನಾಡಿ, ಶುಕ್ರವಾರ ತೇಘ್ರಾ ವಿಭಾಗದಲ್ಲಿ "ಕೆಲವು ವಿಷಕಾರಿ ರಾಸಾಯನಿಕ" ಸೇವಿಸಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. "ನಾವು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ತನಿಖೆ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.

SCROLL FOR NEXT