ದೇಶ

ಎನ್ಐಟಿ ಭೂ ಹಗರಣ: ಮಹಾರಾಷ್ಟ್ರ ಸಿಎಂ ಶಿಂಧೆ ರಾಜೀನಾಮೆಗೆ ಎಂವಿಎ ಆಗ್ರಹ

Lingaraj Badiger

ಮುಂಬೈ: ನಾಗ್ಪುರ ಇಂಪ್ರೂವ್‌ಮೆಂಟ್ ಟ್ರಸ್ಟ್‌(ಎನ್‌ಐಟಿ)ನ ಐದು ಎಕರೆ ಭೂಮಿಯನ್ನು 16 ಡೆವಲಪರ್‌ಗಳಿಗೆ ಕಡಿಮೆ ಬೆಲೆಗೆ ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ರಾಜೀನಾಮೆ ನೀಡಬೇಕು ಎಂದು ಮಹಾ ವಿಕಾಸ್ ಅಘಾಡಿ ಮಂಗಳವಾರ ಒತ್ತಾಯಿಸಿದೆ.

ಸಿಎಂ ಏಕನಾಥ್ ಶಿಂಧೆ ಅವರು ಮೊದಲು ರಾಜೀನಾಮೆ ನೀಡಿ ನ್ಯಾಯಯುತವಾಗಿ ವಿಚಾರಣೆ ಎದುರಿಸಲಿ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಒಂದು ವೇಳೆ ಶಿಂಧೆ ಸಿಎಂ ತಮ್ಮ ಹುದ್ದೆಯಲ್ಲಿಯೇ ಮುಂದುವರಿದರೆ ತನಿಖಾ ವರದಿಯ ಫಲಿತಾಂಶ ತಿರುಚುವ ಸಾಧ್ಯತೆಗಳಿವೆ ಎಂದಿದ್ದಾರೆ.

ಏಕನಾಥ್ ಶಿಂಧೆ ಅವರು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ವೇಳೆ 16 ಡೆವಲಪರ್‌ಗಳಿಗೆ ಐದು ಎಕರೆ ಎನ್‌ಐಟಿ ಭೂಮಿಯನ್ನು ಹಂಚಿದ್ದರು ಎಂದು ಎಂವಿಎ ಆರೋಪಿಸಿದೆ. 100 ಕೋಟಿ ಮೌಲ್ಯದ ಭೂಮಿಯನ್ನು ಕೇವಲ ಎರಡು ಕೋಟಿ ರೂಪಾಯಿಗೆ ನೀಡಲಾಗಿದೆ ಎಂದು ಎಂವಿಎ ಹೇಳಿದೆ.

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದು, ಡೆವಲಪರ್‌ಗಳಿಗೆ ಭೂಮಿ ಹಂಚಿಕೆಗೆ ಸರ್ಕಾರ ಈಗಾಗಲೇ ತಡೆ ನೀಡಿದೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸ್ಪಷ್ಟಪಡಿಸಿದ್ದಾರೆ. ಈ ನಿವೇಶನಗಳ ಹಂಚಿಕೆಯನ್ನೂ ಸರ್ಕಾರ ರದ್ದುಗೊಳಿಸಿದೆ ಎಂದು ಹೇಳಿದ್ದಾರೆ.

SCROLL FOR NEXT