ದೇಶ

ನೋಟು ಅಮಾನ್ಯೀಕರಣ: ಜನವರಿ 2 ರಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟ

Lingaraj Badiger

ನವದೆಹಲಿ: 2016ರಲ್ಲಿ 1 ಸಾವಿರ ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಿದ್ದ ಕೇಂದ್ರ ಸರ್ಕಾರ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಹಲವು ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ, ಜನವರಿ 2 ರಂದು ತೀರ್ಪು ಪ್ರಕಟಿಸಲಿದೆ. 

ಸಂವಿಧಾನ ಪೀಠದ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ಎಸ್ ಎ ನಜೀರ್ ಅವರು ಜನವರಿ 4 ರಂದು ನಿವೃತ್ತರಾಗಲಿದ್ದಾರೆ. ಹೀಗಾಗಿ ನಿಗದಿತ ದಿನದಂತೆ ಸಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.

ಡಿಸೆಂಬರ್ 7 ರಂದು ಸುಪ್ರೀಂ ಕೋರ್ಟ್, 2016 ರ ನೋಟ್ ಬ್ಯಾನ್ ನಿರ್ಧಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ಗೆ ನಿರ್ದೇಶನ ನೀಡಿತ್ತು ಮತ್ತು ತೀರ್ಪನ್ನು ಕಾಯ್ದಿರಿಸಿತ್ತು.

500 ಮತ್ತು 1000 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್‌ನೊಂದಿಗೆ ವ್ಯಾಪಕವಾದ ಸಮಾಲೋಚನೆಯ ನಂತರ ಮತ್ತು ನೋಟು ನಿಷೇಧವನ್ನು ಜಾರಿಗೊಳಿಸುವ ಮೊದಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

SCROLL FOR NEXT