ಚಂಡೀಗಢ: ಭಾರತ್ ಜೋಡೊ ಯಾತ್ರೆಯಲ್ಲಿ ಕೇಂದ್ರದ ಮಾಜಿ ಸಚಿವ ಜಿತೇಂದ್ರ ಸಿಂಗ್ ಅಹಿರ್ವಾರ್ ಅವರು ರಾಹುಲ್ ಗಾಂಧಿಗೆ ಶೂ ಲೇಸ್ ಕಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಇದಕ್ಕೆ ಪ್ರತಿಕ್ರಿಯೆ ನಿಡಿರುವ ಜಿತೇಂದ್ರ ಸಿಂಗ್ ಅವರು, ನಾನು ನನ್ನ ಶೂ ಲೇಸ್ ಕಟ್ಟಿಕೊಳ್ಳುತ್ತಿದ್ದೆ ರಾಹುಲ್ ಗಾಂಧಿಯವರದ್ದಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಮಾಡಿರುವ ಟ್ವೀಟ್ ಸಂಪೂರ್ಣ ಸುಳ್ಳು, ಪಾದಯಾತ್ರೆ ಸಮಯದಲ್ಲಿ ನನ್ನ ಶೂ ಲೇಸ್ ಕಟ್ಟಿಕೊಳ್ಳುತ್ತಿದ್ದೆ ಇದೇ ಸಮಯದಲ್ಲಿ ರಾಹುಲ್ ಗಾಂಧಿ ಅಲ್ಲೇ ನಿಂತಿದ್ದರು ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಹರಿಯಾಣದಲ್ಲಿ ಸಾಗುತ್ತಿರುವ ಪಾದಯಾತ್ರೆ ಸಂದರ್ಭದಲ್ಲಿ ಜಿತೇಂದ್ರ ಸಿಂಗ್ ಅಹಿರ್ವಾರ್ ಅವರು ರಾಹುಲ್ ಗಾಂಧಿ ಎದುರು ಮಂಡಿಯೂರಿ ಕುಳಿತು ಶೂ ಲೇಸ್ ಕಟ್ಟಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಬಿಜೆಪಿಯ ಅಮಿತ್ ಮಾಳವೀಯ ಅವರು ವಿಡಿಯೊವನ್ನು ಟ್ವೀಟ್ ಮಾಡಿ, ರಾಹುಲ್ ನಡೆಯನ್ನು ಖಂಡಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರದಾಡುತ್ತಿದೆ. ಈ ಘಟನೆ ಸಂಬಂಧ ಬಿಜೆಪಿ ಮುಖಂಡರು ಕ್ಷಮೆಯಾಚಿಸಿ, ವಿಡಿಯೊ ಡಿಲೀಟ್ ಮಾಡಬೇಕು ಇಲ್ಲವಾದಲ್ಲಿ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.