ದೇಶ

ಕೋವಿಡ್ ರೂಪಾಂತರಿ ಎದುರಿಸಲು ಸಿದ್ಧತೆ: ದೇಶಾದ್ಯಂತ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ

Srinivas Rao BV

ನವದೆಹಲಿ: ಕೋವಿಡ್ ಹೊಸ ರೂಪಾಂತರಿ ಬಿ.ಎಫ್.7 ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೇಶಾದ್ಯಂತ ಆರೋಗ್ಯ ವ್ಯವಸ್ಥೆಯ ಸಿದ್ಧತೆಯನ್ನು ಪರಿಶೀಲಿಸಲು ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಯಿತು. 

ಮಾಕ್ ಡ್ರಿಲ್ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮಾತನಾಡಿದ್ದು, ಇಂತಹ ಪರಿಸ್ಥಿತಿಯಲ್ಲಿ ಉಪಕರಣಗಳು ಮತ್ತು ಮಾನವ ಸಂಪನ್ಮೂಲಗಳ ಕಾರ್ಯಾಚರಣೆಯ ಸಿದ್ಧತೆ ಪರಿಶೀಲಿಸುವುದು ಮುಖ್ಯ ಎಂದು ಹೇಳಿದ್ದಾರೆ. 

ಕೇಂದ್ರ ಸರ್ಕಾರ ನಿರ್ವಹಿಸುತ್ತಿರುವ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಮನ್ಸುಖ್ ಮಾಂಡವೀಯ ಅಣಕು ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಆಸ್ಪತ್ರೆಗಳಲ್ಲಿ ಇಂತಹ ಅಣಕು ಕಾರ್ಯಾಚರಣೆಯನ್ನು ನಡೆಸಲು ಕೇಂದ್ರ ಸರ್ಕಾರ ರಾಜ್ಯಗಳಿಗೆ, ಕೇಂದ್ರಾಡಳಿತ ಪ್ರದೇಶಕ್ಕೆ ಸೂಚನೆ ನೀಡಿತ್ತು. 

ಆಕ್ಸಿಜನ್ ಬೆಂಬಲಿತ ಬೆಡ್ ಗಳು, ಐಸಿಯು ಬೆಡ್ ಹಾಗೂ ವೆಂಟಿಲೇಟರ್ ಬೆಂಬಲಿತ ಬೆಡ್ ಗಳ ಲಭ್ಯತೆ ಹಾಗೂ ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನು ಈ ಅಣಕು ಕಾರ್ಯಾಚರಣೆ ವೇಳೆ ಪರಿಶೀಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕೇವಲ ಸರ್ಕಾರಿ ಆಸ್ಪತ್ರೆಗಳಷ್ಟೇ ಅಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿಯೂ ಈ ಅಣಕು ಕಾರ್ಯಾಚರಣೆ ನಡೆಸಲಾಗಿದೆ. ಜನತೆ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿರುವುದು ಅಗತ್ಯ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ. 

ಇನ್ನು ಜನತೆ ಕೋವಿಡ್ ಸಂಬಂಧಿತ ದೃಢಪಡದ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ದೂರವಿರಬೇಕು ಹಾಗೂ ಕೋವಿಡ್ ತಡೆಗೆ ಅತಿ ಹೆಚ್ಚು ಜಾಗರೂಕತೆಯಿಂದ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನ್ಸುಖ್ ಮಾಂಡವೀಯ ಕರೆ ನೀಡಿದ್ದಾರೆ. ಭಾರತದಲ್ಲಿ 24 ಗಂಟೆಗಳಲ್ಲಿ 157 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ.

SCROLL FOR NEXT