ದೇಶ

ಮನೆ ಕೆಲಸದಾಕೆ ಮೇಲೆ ಹಲ್ಲೆ ನಡೆಸಿದ ನೋಯ್ಡಾ ಹೌಸಿಂಗ್ ಸೊಸೈಟಿಯ ಮಹಿಳೆಯ ಬಂಧನ

Lingaraj Badiger

ನೋಯ್ಡಾ: ನೋಯ್ಡಾದ ಸೆಕ್ಟರ್ 121 ರಲ್ಲಿನ ಕ್ಲಿಯೋ ಕೌಂಟಿ ಸೊಸೈಟಿಯಲ್ಲಿ ಮನೆ ಕೆಲಸದ ಮಹಿಳೆಯನ್ನು ಸುಮಾರು ಎರಡು ತಿಂಗಳ ಕಾಲ ಒತ್ತೆಯಾಳಾಗಿರಿಸಿಕೊಂಡು, ಆಕೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನೋಯ್ಡಾದ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಎರಡು ದಿನಗಳ ಹಿಂದೆ 40 ವರ್ಷದ ಶೆಫಾಲಿ ಕೌಲ್ ಎಂಬ ಮಹಿಳೆ ತನ್ನ ಮನೆ ಕೆಲಸ ಮಾಡುತ್ತಿದ್ದ 20 ವರ್ಷದ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಲಿಫ್ಟ್‌ನಿಂದ ಹೊರಗೆ ಎಳೆದುಕೊಂಡು ಹೋಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

ಮಂಗಳವಾರ ಮನೆ ಕೆಲಸದ ಮಹಿಳೆಯ ತಂದೆ ಪದಮ್ ಸಿಂಗ್ ಅವರು ತಮ್ಮ ಮಗಳನ್ನು ಅಪಹರಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ನೀಡಿದ ನಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿದ ಪೊಲೀಸರು, ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಹಲ್ಲೆ ನಡೆಸಿ, ಒತ್ತೆಯಾಳಾಗಿ ಇಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ತಂದೆ ನೀಡಿದ ಮಾಹಿತಿ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು.

ಏತನ್ಮಧ್ಯೆ, ಆರೋಪಿ ಕೌಲ್ ತನ್ನ ಮನೆ ಕೆಲಸದ ಮಹಿಳೆ ಮನೆಯಿಂದ ವಸ್ತುಗಳನ್ನು ಕದಿಯುತ್ತಿದ್ದಳು ಮತ್ತು ತನ್ನ ಊಟಕ್ಕೆ ನಿದ್ರೆ ಮಾತ್ರೆಗಳನ್ನು ಸೇರಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಅಲ್ಲದೆ ತನ್ನ ಆರೋಪಕ್ಕೆ ಪುರಾವೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳು ತನ್ನ ಬಳಿ ಇವೆ ಎಂದು ಹೇಳಿಕೊಂಡಿದ್ದಾರೆ.

SCROLL FOR NEXT