ದೇಶ

ಮಣಿಪುರದಲ್ಲಿ ಭಾರೀ ಭೂಕುಸಿತ; ನದಿಯಿಂದ 17 ಶವ ಹೊರತೆಗೆಯಲಾಗಿದೆ - ಎನ್ ಡಿಆರ್ ಎಫ್

Lingaraj Badiger

ಗುವಾಹಟಿ: ಮಣಿಪುರದ ನೋನಿ ಜಿಲ್ಲೆಯ ತುಪುಲ್ ಯಾರ್ಡ್ ರೈಲ್ವೆ ನಿರ್ಮಾಣ ಸ್ಥಳದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಇದುವರೆಗೆ 17 ಶವಗಳನ್ನು ಹೊರ ತೆಗೆಯಲಾಗಿದೆ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಎನ್‌ಡಿಆರ್‌ಎಫ್ ಶುಕ್ರವಾರ ತಿಳಿಸಿದೆ. 

ತುಪುಲ್ ಯಾರ್ಡ್ ರೈಲ್ವೆ ನಿರ್ಮಾಣ ಸ್ಥಳದ ಸಮೀಪವಿರುವ 107 ಟೆರಿಟೋರಿಯಲ್ ಆರ್ಮಿ (ಟಿಎ) ಶಿಬಿರದಲ್ಲಿ ಬುಧವಾರ ರಾತ್ರಿ ಭಾರೀ ಭೂಕುಸಿತ ಸಂಭವಿಸಿತ್ತು. ಭೂಕುಸಿತದ ಮಣ್ಣು ನದಿಗೆ ಅಡ್ಡಲಾಗಿ ಬಿದ್ದಿದ್ದು ಅಣೆಕಟ್ಟು ನಿರ್ಮಾಣದ ಸ್ಥಿತಿ ಉಂಟಾಗಿದೆ. ನದಿಯಿಂದ ಮೃತದೇಹಗಳನ್ನು ಹೊರತೆಗೆಯಲು ಅಗೆಯುವ ಯಂತ್ರಗಳನ್ನು ಬಳಸಲಾಗುತ್ತಿದೆ. ಹಲವಾರು ಯೋಧರು ಸೇರಿದಂತೆ ಕನಿಷ್ಠ 55 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಸ್ಥಳದಲ್ಲಿ ಕೇಂದ್ರ ಮತ್ತು ರಾಜ್ಯ ವಿಪತ್ತು ಪಡೆಗಳ ಜೊತೆಗೆ ಭಾರತೀಯ ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಪ್ರಾದೇಶಿಕ ಸೇನೆಯಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜಿರಿಬಾಮ್ ಜಿಲ್ಲೆಯಿಂದ ರಾಜ್ಯದ ರಾಜಧಾನಿ ಇಂಫಾಲ್‌ಗೆ ನಿರ್ಮಿಸಲಾಗುತ್ತಿರುವ ರೈಲು ಮಾರ್ಗಕ್ಕೆ ಪ್ರಾದೇಶಿಕ ಸೇನೆಯು ಭದ್ರತೆಯನ್ನು ಒದಗಿಸುತ್ತಿದೆ.

ಅವಶೇಷಗಳಲ್ಲಿ ಹುದುಗಿರುವವರನ್ನ ಪತ್ತೆಹಚ್ಚಲು ವಾಲ್ ರಾಡಾರ್, ಶ್ವಾನಪಡೆಯನ್ನೂ ಕಾರ್ಯಾಚರಣೆಯಲ್ಲಿ ಬಳಸಲಾಗ್ತಿದೆ. ಇಲ್ಲಿಯವರೆಗೆ ಟೆರಿಟೋರಿಯಲ್ ಆರ್ಮಿಯ 13 ಸಿಬ್ಬಂದಿ ಮತ್ತು ಐವರು ನಾಗರಿಕರನ್ನು ರಕ್ಷಿಸಲಾಗಿದೆ. ನಾಪತ್ತೆಯಾದ ಸಿಬ್ಬಂದಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಎನ್ ಡಿಆರ್ ಎಫ್ ವಕ್ತಾರರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಆರ್ಥಿಕ ನೆರವು ಘೋಷಿಸಿದ್ದಾರೆ.

SCROLL FOR NEXT