ದೇಶ

'ಬಡ ಮತ್ತು ಬುಡಕಟ್ಟು ಜನರ ಪ್ರತೀಕ': ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಬೆಂಬಲಿಸಿದ ಅಕಾಲಿದಳ

Lingaraj Badiger

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರಿಗೆ ಶಿರೋಮಣಿ ಅಕಾಲಿದಳ ಬೆಂಬಲ ಘೋಷಿಸಿದೆ. ಅಲ್ಪಸಂಖ್ಯಾತರು, ಶೋಷಿತರು ಮತ್ತು ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರ ಘನತೆಯ ಪ್ರತೀಕವಾಗಿರುವುದರಿಂದ ಮುಂಬರುವ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ದ್ರೌಪದಿ ಮುರ್ಮು ಅವರ ಮನವಿಯನ್ನು ಶಿರೋಮಣಿ ಅಕಾಲಿದಳ ಇಂದು ಸ್ವೀಕರಿಸಿದೆ.

ಈ ಸಂಬಂಧ ಇಂದು ಮಧ್ಯಾಹ್ನ ಚಂಡೀಗಢದಲ್ಲಿ ನಡೆದ ಪಕ್ಷದ ಕೋರ್ ಕಮಿಟಿಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದು, ದ್ರೌಪತಿ ಮುರ್ಮು ಅವರು ದೇಶದ ಬಡ ಮತ್ತು ಬುಡಕಟ್ಟು ಭಾಗಗಳ ಪ್ರತೀಕವಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದೆ.

ನಂತರ ಶಿರೋಮಣಿ ಅಕಾಲಿದಳ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರು ದ್ರೌಪತಿ  ಮುರ್ಮು ಅವರನ್ನು ಭೇಟಿಯಾಗಿ ಅವರನ್ನು ಬೆಂಬಲಿಸುವ ಪಕ್ಷದ ನಿರ್ಧಾರವನ್ನು ತಿಳಿಸಿದರು. ಈ ವೇಳೆ ಪಕ್ಷದ ಹಿರಿಯ ನಾಯಕರಾದ ಬಲ್ವಿಂದರ್ ಸಿಂಗ್ ಭುಂದರ್, ಚರಂಜಿತ್ ಸಿಂಗ್ ಅತ್ವಾಲ್, ಪ್ರೇಮ್ ಸಿಂಗ್ ಚಂದುಮಜ್ರಾ ಮತ್ತು ಹರ್ಚರಣ್ ಬೈನ್ಸ್ ಜೊತೆಗಿದ್ದರು.

ಅಲ್ಪಸಂಖ್ಯಾತರ ಮನಸ್ಸಿನಿಂದ ಅಭದ್ರತೆಯ ಭಾವನೆಯನ್ನು ತೆಗೆದುಹಾಕುವುದು ಮತ್ತು ಪಂಜಾಬ್‌ಗೆ ವಿಶೇಷವಾಗಿ ಸಿಖ್ಖರಿಗೆ ನ್ಯಾಯದಂತಹ ಪ್ರಮುಖ ವಿಷಯಗಳ ಕುರಿತು ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ನಮ್ಮ ವಿಚಾರಗಳ ವ್ಯತ್ಯಾಸಗಳಿದ್ದರೂ ಅತ್ಯಂತ ದೀನದಲಿತರು ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದವರಾದ ದ್ರೌಪತಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಾದಲ್ ತಿಳಿಸಿದ್ದಾರೆ.

ಗೋಲ್ಡನ್ ಟೆಂಪಲ್ ಮೇಲೆ ದಾಳಿ ಮಾಡುವ ಮೂಲಕ ಸಿಖ್ ಸಮುದಾಯಕ್ಕೆ ದ್ರೋಹ ಮತ್ತು ಸಾವಿರಾರು ಸಿಖ್ಖರನ್ನು ಕೊಂದ ಅತ್ಯಂತ ಹಳೆಯ ಪಕ್ಷ  ಕಾಂಗ್ರೆಸ್ನಿಂದ ಕಣಕ್ಕಿಳಿದ ಅಭ್ಯರ್ಥಿಯನ್ನು ಅವರ ಪಕ್ಷವು ಅನುಸರಿಸಲು ಅಥವಾ ಬೆಂಬಲಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಬಾದಲ್ ಹೇಳಿದರು.

SCROLL FOR NEXT