ದೇಶ

ಮಣಿಪುರ ಭೂ ಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿಕೆ; ಇನ್ನೂ 38 ಮಂದಿ ನಾಪತ್ತೆ

Srinivas Rao BV

ಗುವಾಹಟಿ: ಮಣಿಪುರದಲ್ಲಿ ಮಳೆಯ ಪರಿಣಾಮ ಭೂಕುಸಿತ ಸಂಭವಿಸಿದ್ದು, ಅವಶೇಷಗಳಡಿ ಸಿಲುಕಿದ್ದವರ ಪೈಕಿ ಸಾವನ್ನಪ್ಪಿರುವವರ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ. 

ಮಣಿಪುರದ ನೋನಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ನಿಲ್ದಾಣದ ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿದ್ದು ಇನ್ನೂ 38 ಮಂದಿ ನಾಪತ್ತೆಯಾಗಿದ್ದಾರೆ. ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯಾಚಾರಣೆ ಮುಂದುವರೆದಿದೆ. ತುಪುಲ್ ಪ್ರದೇಶದಲ್ಲಿ ಭೂಕುಸಿತದಿಂದ ಪರಿಸ್ಥಿತಿ ಗಂಭೀರವಾಗಿದ್ದು, ಶನಿವಾರ ಬೆಳಿಗ್ಗೆ ಧಾರಕಾರ ಮಳೆ ಸುರಿದಿರುವುದರ ಪರಿಣಾಮ ಕೆಟ್ಟಹವಾಮಾನ ಇನ್ನೂ ಮುಂದುವರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

"ಈ ವರೆಗೂ ಗಾಯಗೊಂಡಿದ್ದ 18 ಮಂದಿಯನ್ನು ಹಾಗೂ 25 ಮಂದಿ ಸಾವನ್ನಪ್ಪಿರುವವರನ್ನು ಅವಶೇಷಗಳಿಂದ ಹೊರತೆಗೆಯಲಾಗಿದ್ದು, ಇನ್ನೂ 38 ಮಂದಿ ನಾಪತ್ತೆಯಾಗಿದ್ದಾರೆ" ಎಂದು ಬಿರೇನ್ ಸಿಂಗ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಭೂಕುಸಿತದ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. 

ಭೂಕುಸಿತದಿಂದ ಉಂಟಾದ ಭಗ್ನಾವಶೇಷಗಳು ಇಜಾಯ್ ನದಿಗೆ ಅಡ್ಡಲಾಗಿದ್ದು, ಅಣೆಕಟ್ಟು ಮಾದರಿಯಲ್ಲಿ ನೀರಿನ ಹರಿವನ್ನು ತಡೆಯುತ್ತಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೃಹತ್ ಯಂತ್ರಗಳ ಸಹಾಯದ ಮೂಲಕ ಭಗ್ನಾವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಸೇನೆ, ಅಸ್ಸಾಂ ರೈಫಲ್ಸ್, ಟೆರಿಟೋರಿಯಲ್ ಆರ್ಮಿ, ಎಸ್ ಡಿಆರ್ ಎಫ್ ಹಾಗೂ ಎನ್ ಡಿಆರ್ ಎಫ್ ಗಳು ರಕ್ಷಣಾ ಕಾರ್ಯಾಚರಣೆ, ಶೋಧಕಾರ್ಯಾಚರಣೆಯಲ್ಲಿ ತೊಡಗಿವೆ. 

ಟೆರಿಟೋರಿಯಲ್ ಆರ್ಮಿ ಸಿಬ್ಬಂದಿಗಳ ಪೈಕಿ ಈ ವರೆಗೂ 13 ಮಂದಿ ಹಾಗೂ ಐವರು ನಾಗರಿಕರನ್ನು ಸುರಕ್ಷಿತವಾಗಿ ಪ್ರವಾಹ-ಭೂಕುಸಿತದ ಪರಿಸ್ಥಿತಿಯಿಂದ ಹೊರತರಲಾಗಿದೆ. 12 ಮಂದಿ ಟೆರಿಟೋರಿಯಲ್ ಆರ್ಮಿ ಸಿಬ್ಬಂದಿಗಳು ಹಾಗೂ 26 ನಾಗರಿಕರಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ ಎಂದು ರಕ್ಷಣಾ ವಕ್ತಾರರು ಹೇಳಿದ್ದು, ಜೂನಿಯರ್ ಕಮಿಷನ್ಡ್ ಅಧಿಕಾರಿ ಸೇರಿದಂತೆ 14 ಸಿಬ್ಬಂದಿಗಳ ಪಾರ್ಥಿವ ಶರೀರವನ್ನು ಅವರ ಮನೆಗೆಗೆ ಐಎಎಫ್ ವಿಮಾನ ಹಾಗೂ ಸೇನಾ ಹೆಲಿಕಾಫ್ಟರ್ ಗಳ ಮೂಲಕ ಕಳಿಸಲಾಗಿದ್ದು, ಮೃತ ಸಿಬ್ಬಂದಿಗಳಿಗೆ ಸೇನಾ ಗೌರವಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ರಕ್ಷಣಾ ಇಲಾಖೆ ವಕ್ತಾರರು ಹೇಳಿದ್ದಾರೆ. 

SCROLL FOR NEXT