ದೇಶ

ಮುಂದಿನ 30-40 ವರ್ಷ ಬಿಜೆಪಿ ಯುಗ, ಭಾರತ ವಿಶ್ವಗುರುವಾಗಲಿದೆ: ಅಮಿತ್ ಶಾ

Sumana Upadhyaya

ಹೈದರಾಬಾದ್: ಮುಂದಿನ 30 ರಿಂದ 40 ವರ್ಷಗಳು ಬಿಜೆಪಿ ಪಕ್ಷದ ಯುಗವಾಗಿದ್ದು ಭಾರತವು "ವಿಶ್ವ ಗುರು" (ವಿಶ್ವ ನಾಯಕ) ಆಗಲಿದೆ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.

ಹೈದರಾಬಾದ್ ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಇಂದು ಮಾತನಾಡಿದ ಅವರು, ರಾಜವಂಶದ ರಾಜಕಾರಣ, ಜಾತೀಯತೆ ಮತ್ತು ತುಷ್ಟೀಕರಣದ ರಾಜಕೀಯ ಮಹಾ ಪಾಪಗಳಾಗಿದ್ದು ಹಲವಾರು ವರ್ಷಗಳಿಂದ ದೇಶವು ಅನುಭವಿಸುತ್ತಿರುವ ನೋವುಗಳ ಹಿಂದಿನ ಕಾರಣಗಳಿವು ಎಂದು ಹೇಳಿದರು.

ಗೃಹ ಸಚಿವರ ಭಾಷಣದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪಕ್ಷದ ಕುಟುಂಬ ರಾಜಕಾರಣ, ಜಾತೀಯ ರಾಜಕಾರಣ ಮತ್ತು ತುಷ್ಟೀಕರಣ ರಾಜಕೀಯವನ್ನು ಕೊನೆಗಾಣಿಸಿ ದೇಶದ ಮತ್ತು ಜನರ ಅಭಿವೃದ್ಧಿ, ಸಾಧನೆಗಳ ಮೂಲಕ ಪಕ್ಷವನ್ನು ಜನರು ಮಾತನಾಡುವಂತಾಗಬೇಕೆಂದು ಶಾ ಒತ್ತಿಹೇಳಿದ್ದಾರೆ ಎಂದು ತಿಳಿಸಿದರು.

ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಬಿಜೆಪಿ ಕುಟುಂಬ ಆಡಳಿತವನ್ನು ಕೊನೆಗೊಳಿಸಲಿದೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಒಡಿಶಾದಲ್ಲಿ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಗೃಹ ಸಚಿವರು ಹೇಳಿದರು. ಬಿಜೆಪಿಯ ಮುಂದಿನ ಸುತ್ತಿನ ಬೆಳವಣಿಗೆಯು ದಕ್ಷಿಣ ಭಾರತದಿಂದ ಆಗಲಿದೆ ಎಂದು ಸಭೆಯಲ್ಲಿ ಸಾಮೂಹಿಕ ಭರವಸೆಯನ್ನು ನಾಯಕರು ಹೊಂದಿದ್ದಾರೆ ಎಂದು ಹಿಮಂತ್ ಬಿಸ್ವ ಹೇಳಿದರು.

ಸಭೆಯಲ್ಲಿ, ಅಮಿತ್ ಶಾ ಅವರು ಇತ್ತೀಚಿಗೆ ಸುಪ್ರೀಂ ಕೋರ್ಟ್ 2002ರ ಗೋದ್ರಾ ಹತ್ಯಾಕಾಂಡ ಬಗ್ಗೆ ನೀಡಿದ್ದ ತೀರ್ಪನ್ನು ಐತಿಹಾಸಿಕ ಎಂದು ಶ್ಲಾಘಿಸಿದರು, ಹತ್ಯೆಯಾದ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ವಿಶೇಷ ತನಿಖಾ ತಂಡ (ಎಸ್‌ಐಟಿ) ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. 2002ರ ಗುಜರಾತ್ ಗಲಭೆ ಪ್ರಕರಣದ ಆರೋಪಿಗಳಲ್ಲಿ ಅಂದಿನ ಮುಖ್ಯಮಂತ್ರಿ ಇಂದಿನ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರಾಗಿದ್ದಾರೆ.

SCROLL FOR NEXT