ದೇಶ

ಕೋವಿಡ್-19 ಎರಡನೇ ಡೋಸ್, ಬೂಸ್ಟರ್ ಡೋಸ್ ನಡುವಿನ ಅಂತರ 9 ರಿಂದ 6 ತಿಂಗಳಿಗೆ ಇಳಿಕೆ

Nagaraja AB

ನವದೆಹಲಿ: ಕೋವಿಡ್-19 ಎರಡನೇ ಹಾಗೂ ಬೂಸ್ಟರ್ ಡೋಸ್ ನಡುವಿನ ಅಂತರವನ್ನು ಈಗಿರುವ 9 ರಿಂದ 12 ತಿಂಗಳಿಗೆ ಕೇಂದ್ರ ಸರ್ಕಾರ ಬುಧವಾರ ಇಳಿಕೆ ಮಾಡಿದೆ. ಇದೀಗ 18-59 ವರ್ಷದೊಳಗಿನ ಎಲ್ಲಾ ಫಲಾನುಭವಿಗಳು ಹಣವನ್ನು ಪಾವತಿಸುವ ಮೂಲಕ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ತೆಗೆದುಕೊಳ್ಳಬಹುದಾಗಿದೆ. 

ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮೂಹ ಸ್ಥಾಯಿ ತಾಂತ್ರಿಕ ಉಪ ಸಮಿತಿ ಕೋವಿಡ್-19 ಎರಡನೇ ಮತ್ತು ಬೂಸ್ಟರ್ ಡೋಸ್‌ಗಳ ನಡುವಿನ ಅಂತರವನ್ನು ಆರು ತಿಂಗಳಿಗೆ ಇಳಿಸುವಂತೆ ಕಳೆದ ತಿಂಗಳು ಶಿಫಾರಸ್ಸು ಮಾಡಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಎನ್‌ಟಿಜಿಐ ಶಿಫಾರಸನ್ನು ಅನುಮೋದಿಸಲಾಗಿದೆ ಎಂದು  ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

18-59 ವರ್ಷ ವಯಸ್ಸಿನ ಎಲ್ಲಾ ಫಲಾನುಭವಿಗಳಿಗೆ ಎರಡನೇ ಡೋಸ್ ಪಡೆದ ಆರು ತಿಂಗಳು ಅಥವಾ 26 ವಾರ ಕಳೆದ  ನಂತರ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ನೀಡಲು ನಿರ್ಧರಿಸಲಾಗಿದೆ ಎಂದು  ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಬಹುದು ಮತ್ತು ಅದನ್ನು ವ್ಯಾಪಕವಾಗಿ ಪ್ರಚಾರ ಮಾಡಬಹುದು ಎಂದು ಭೂಷಣ್  ತಿಳಿಸಿದ್ದಾರೆ.

SCROLL FOR NEXT