ದೇಶ

ಇಂಟರ್ನ್‌ಶಿಪ್ ಗಾಗಿ ಬಂದಿದ್ದ ಐಐಟಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಜಾರ್ಖಂಡ್ ಐಎಎಸ್ ಅಧಿಕಾರಿ ಬಂಧನ! 

Srinivas Rao BV

ರಾಂಚಿ: ಇಂಟರ್ನ್ಶಿಪ್ ಗಾಗಿ ಬಂದಿದ್ದ ಐಐಟಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಜಾರ್ಖಂಡ್ ನಲ್ಲಿ ಐಎಎಸ್ ಅಧಿಕಾರಿ ರಿಯಾಜ್ ಅಹ್ಮದ್ ನ್ನು ಬಂಧಿಸಲಾಗಿದೆ. 

ರಿಯಾಜ್ ಅಹ್ಮದ್ ಖುಂತಿಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿದ್ದು, ತಮ್ಮ ನಿವಾಸದಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯ ಸಂದರ್ಭದಲ್ಲಿ ವಿದ್ಯಾರ್ಥಿನಿಯನ್ನು ಚುಂಬಿಸಲು ಯತ್ನಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. 

ಈ ಬಗ್ಗೆ ಖುಂತಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ನೀಡಿರುವ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಜು.2 ರಂದು ಬೆಳ್ಳಂ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ಆಕೆಗೆ ಮದ್ಯ ಕುಡಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಐಎಎಸ್ ಅಧಿಕಾರಿ ವಿರುದ್ಧ ಕೇಳಿಬಂದಿದೆ.
 
ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಖುಂತಿ ಎಸ್ ಡಿಎಂ ನ ಅಮಾನತು ಆದೇಶ ಪ್ರಕಟಿಸಲು ಸಿಎಂ ಕಚೇರಿಯಿಂದ ನಿರ್ದೇಶನ ನೀಡಲಾಗುವುದು ಎಂದು ಸಿಎಂ ಹೇಮಂತ್ ಸೊರೇನ್ ಹೇಳಿದ್ದಾರೆ. ಐಎಎಸ್ ಅಧಿಕಾರಿ ನಿವಾಸದಲ್ಲಿ ರಾತ್ರಿ ಪ್ರಾರಂಭವಾದ ಪಾರ್ಟಿ ಬೆಳಿಗ್ಗೆ ವರೆಗೂ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
 
ಐಐಟಿ ಮಂಡಿಯ ಗ್ರಾಮೀಣಾಭಿವೃದ್ಧಿ ವಿದ್ಯಾರ್ಥಿನಿ ಇಂಟರ್ನ್ಶಿಪ್ ಮುಕ್ತಾಯಗೊಳಿಸಲು ಖುಂತಿಗೆ ಆಗಮಿಸಿದ್ದರು ಎನ್ನಲಾಗಿದೆ. 

SCROLL FOR NEXT