ದೇಶ

ಮೇಘಸ್ಫೋಟ: ಬಾಲ್ಟಾಲ್ ಮಾರ್ಗದಲ್ಲಿ ಅಮರನಾಥ ಯಾತ್ರೆ ಪುನರಾರಂಭ

Srinivasamurthy VN

ಶ್ರೀನಗರ: ಮೇಘಸ್ಫೋಟ ಮತ್ತು ತೀವ್ರ ಪ್ರವಾಹದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮಂಗಳವಾರ ಮತ್ತೆ ಪುನಾರಂಭಗೊಂಡಿದೆ.

ಹೌದು.. ಹದಿನೈದು ಮಂದಿಯನ್ನು ಬಲಿತೆಗೆದುಕೊಂಡ ಮತ್ತು ಹಲವಾರು ಮಂದಿ ಗಾಯಕ್ಕೆ ಕಾರಣವಾಗಿದ್ದ ಹಠಾತ್ ಪ್ರವಾಹದ ನಂತರ ಖ್ಯಾತ ಪವಿತ್ರ ಯಾತ್ರಾತಾಣ ಅಮರನಾಥ್ ಗುಹೆ ದೇಗುಲಗ್ಗೆ ಭಕ್ತರ ಪ್ರವೇಶ ಸ್ಥಗಿತ ಮಾಡಲಾಗಿತ್ತು. ಇದೀಗ ನಾಲ್ಕು ದಿನಗಳ ಬಳಿಕ ಯಾತ್ರೆಯನ್ನು ಪುನಾರಂಭಗೊಳಿಸಲಾಗಿದೆ.

ಮಂಗಳವಾರ ಬೆಳಗ್ಗೆಯಿಂದಲೇ ಅಮರನಾಥ ಯಾತ್ರೆಯು ಗಂದರ್ಬಾಲ್ ಜಿಲ್ಲೆಯ ಬಾಲ್ಟಾಲ್ ಮಾರ್ಗದಲ್ಲಿ ಪುನರಾರಂಭವಾಗಿದೆ. ಯಾತ್ರಿಕರ ಹೊಸ ಬ್ಯಾಚ್ ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಗುಹೆ ದೇಗುಲಕ್ಕೆ ಮುಂಜಾನೆ ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 8 ರಂದು ದೇಗುಲದ ಸಮೀಪ ಸಂಭವಿಸಿದ ಮೇಘಸ್ಫೋಟ ಮತ್ತು ಆ ಬಳಿಕ ತೀವ್ರ ಪ್ರವಾಹದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿ, 30 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದರು. ಹೀಗಾಗಿ ತೀರ್ಥಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ನಿನ್ನೆ ಅಂದರೆ ಸೋಮವಾರ ಪಹಲ್ಗಾಮ್ ಮಾರ್ಗವಾಗಿ ಯಾತ್ರೆ ಪುನರಾರಂಭಗೊಂಡಿತ್ತು. ಇದರ ಬೆನ್ನಲ್ಲೇ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಬಾಲ್ಟಾಲ್ ಮಾರ್ಗದಲ್ಲೂ ಯಾತ್ರೆ ಪುನಾರಂಭಗೊಂಡಿದೆ.
 

SCROLL FOR NEXT