ದೇಶ

ಐಎಸ್ಐ ಪರ ಗೂಢಚಾರಿಕೆಗಾಗಿ ಪಾಕ್ ಪತ್ರಕರ್ತನಿಗೆ ಆಹ್ವಾನ; ಬಿಜೆಪಿ ಆರೋಪಕ್ಕೆ ಮಾಜಿ ಉಪರಾಷ್ಟ್ರಪತಿ ಅನ್ಸಾರಿ ಪ್ರತಿಕ್ರಿಯೆ ಹೀಗಿದೆ...

Srinivas Rao BV

ನವದೆಹಲಿ: ಐಎಸ್ಐ ಪರ ಭಾರತದಲ್ಲಿ ಗೂಢಚಾರಿಕೆಗಾಗಿ ಪಾಕ್ ಪತ್ರಕರ್ತರನ್ನು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಆಹ್ವಾನಿಸಿದ್ದರು ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬಿಜೆಪಿ ವಕ್ತಾರ ಗೌರವ್ ಭಾಟೀಯ, ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ್ದು, ಅನ್ಸಾರಿ ಅವರು ಹಲವು ಸೂಕ್ಷ್ಮ ಹಾಗೂ ಅತ್ಯಂತ ಗೌಪ್ಯವಾದ ಮಾಹಿತಿಗಳನ್ನು ತಮ್ಮೊಂದಿಗೆ ಹಂಚಿಕೊಂಡಿದ್ದರು ಎಂದು ಹೇಳಿದ್ದನ್ನು ಆಧಾರವಾಗಿಟ್ಟುಕೊಂಡು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಇರಾನ್ ನಲ್ಲಿ ಅನ್ಸಾರಿ ಅವರು ದೂತವಾಸ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ದೇಶದ ಹಿತಾಸಕ್ತಿಗಳಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ರಾ ಮಾಜಿ ಕಾರ್ಯಕಾರಿ ಅವರ ಹೇಳಿಕೆಗಳನ್ನೂ ಭಾಟಿಯಾ ಉಲ್ಲೇಖಿಸಿದ್ದಾರೆ.
 
ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಅನ್ಸಾರಿ, ಹಮೀದ್ ಅನ್ಸಾರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.   ನನ್ನ ಮೇಲಿನ ಆರೋಪ ಶುದ್ಧ ಸುಳ್ಳು ಎಂದು ಅನ್ಸಾರಿ ಹೇಳಿದ್ದು, ಪಾಕಿಸ್ತಾನದ ಗೂಢಚಾರಿಕೆ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಅಥವಾ ISI ಯೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಪಾಕಿಸ್ತಾನಿ ಪತ್ರಕರ್ತರಾದ ನುಸ್ರತ್ ಮಿರ್ಜಾ ಅವರನ್ನು ಭೇಟಿಯಾಗಿರುವ ಅಥವಾ ಆಹ್ವಾನಿಸಿರುವ ಆರೋಪವನ್ನ ನಿರಾಕರಿಸಿದ್ದಾರೆ.

ಇರಾನ್‌ನಲ್ಲಿ ಭಾರತದ ರಾಯಭಾರಿಯಾಗಿ ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂಬ ಮಾಜಿ ಬೇಹುಗಾರಿಕಾ ಸಂಸ್ಥೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಅಧಿಕಾರಿಯ ಕಾಮೆಂಟ್‌ಗಳನ್ನು ಉಲ್ಲೇಖಿಸಿ ಹಮೀದ್ ಅನ್ಸಾರಿ ಬಿಜೆಪಿ ಮಾಡಿದ ಆರೋಪಗಳನ್ನು ತಿರಸ್ಕರಿಸಿದರು.

ನಿನ್ನೆ ಮತ್ತು ಇಂದು ನನ್ನ ಮೇಲೆ ವೈಯಕ್ತಿಕವಾಗಿ ಮಾಧ್ಯಮಗಳ ವಿಭಾಗಗಳಲ್ಲಿ ಮತ್ತು ಭಾರತೀಯ ಜನತಾ ಪಕ್ಷದ ಅಧಿಕೃತ ವಕ್ತಾರರಿಂದ ಸುಳ್ಳು ಹೇಳಲಾಗಿದೆ.   ಭಾರತದ ಉಪ ರಾಷ್ಟ್ರಪತಿಗಳಿಂದ ವಿದೇಶಿ ಗಣ್ಯರಿಗೆ ಆಹ್ವಾನವು ಸಾಮಾನ್ಯವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಸರ್ಕಾರದ ಸಲಹೆಯ ಮೇರೆಗೆ ಎಂಬುದು ತಿಳಿದಿರುವ ಸಂಗತಿಯಾಗಿದೆ. ಭಯೋತ್ಪಾದನೆ ಬಗ್ಗೆ ದೆಹಲಿಯಲ್ಲಿ ನಡೆದ ಸಭೆಗೆ ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾ ಅವರನ್ನು ಆಹ್ವಾನಿಸಲಾಗಿತ್ತು ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಅನ್ಸಾರಿ, ಉಪ ರಾಷ್ಟ್ರಪತಿ ವಿದೇಶಿ ಪ್ರತಿನಿಧಿಗಳಿಗೆ ಆಹ್ವಾನ ಕಳುಹಿಸುವುದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕವೇ ಆಗಿದೆ. ಸಂಘಟಕರು ಈ ಪಟ್ಟಿಯನ್ನು ಪಡೆಯುವುದು ಸಾಮಾನ್ಯ ಸಂಗತಿ. ನಾನು ಅವರನ್ನು ಯಾವತ್ತೂ ಆಹ್ವಾನಿಸಲಿಲ್ಲ ಅಥವಾ ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ.

SCROLL FOR NEXT