ದೇಶ

ಹಿಜಾಬ್ ವಿವಾದ: ಮುಂದಿನ ವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ

Sumana Upadhyaya

ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ನಿಷೇಧ (Hijab row) ಹೇರಿರುವ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಮುಂದಿನ ವಾರ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ವಿವಾದ ಕುರಿತ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸಬೇಕು ಎಂದು ಅಡ್ವೊಕೇಟ್ ಪ್ರಶಾಂತ್ ಭೂಷಣ್ ಇಂದು ಸುಪ್ರೀಂ ಕೋರ್ಟ್ ನಲ್ಲಿ ಕಲಾಪ ಆರಂಭ ವೇಳೆ ನ್ಯಾಯಪೀಠದ ಗಮನಕ್ಕೆ ತಂದರು. ಕರ್ನಾಟಕದ ಹಿಜಾಬ್ ವಿವಾದ ವಿಚಾರಣೆಯನ್ನು ಕೈಗೆತ್ತಿಕೊಂಡಿಲ್ಲ. ಮಾರ್ಚ್ ತಿಂಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಅದಕ್ಕೆ ಉತ್ತರಿಸಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಮಣ, ಎರಡು ನ್ಯಾಯಪೀಠಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ನಾವು ಅರ್ಜಿಗಳ ವಿಚಾರಣೆಯನ್ನು ಮರುಹಂಚಿಕೆ ಮಾಡಬೇಕು. ಮುಂದಿನ ವಾರ ಸೂಕ್ತ ನ್ಯಾಯಪೀಠದ ಮುಂದೆ ವಿಚಾರಣೆಯನ್ನು ಕೈಗೆತ್ತಿಕೊಳ್ಳೋಣ ಎಂದರು.

ಕರ್ನಾಟಕ ಹೈಕೋರ್ಟ್ ಕಳೆದ ಮಾರ್ಚ್ 15ರಂದು ನೀಡಿದ್ದ ತೀರ್ಪಿಗೆ ವಿರುದ್ಧವಾಗಿ ಸುಪ್ರೀಂ ಕೋರ್ಟ್ ನಲ್ಲಿ ಹಲವು ವಿಶೇಷ ರಜಾ ಅರ್ಜಿ (Special leave petition-SLP) ಸಲ್ಲಿಕೆಯಾಗಿವೆ. ಕರ್ನಾಟಕ ಸರ್ಕಾರದ ಆದೇಶ ಪ್ರಕಾರ ಮುಸ್ಲಿಂ ವಿದ್ಯಾರ್ಥಿನಿಯರು ಪದವಿ ಪೂರ್ವ ತರಗತಿಗಳವರೆಗೆ ಹಿಜಾಬ್ ಧರಿಸಿಕೊಂಡು ತರಗತಿಯೊಳಗೆ ಪ್ರವೇಶಿಸುವಂತಿಲ್ಲ. 

ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಹಾಗೂ ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್, ಜೆಎಂ ಖಾಜಿ ಅವರನ್ನೊಳಗೊಂಡ ಪೂರ್ಣಪೀಠ ಇಸ್ಲಾಂ ಧರ್ಮದಲ್ಲಿ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದು ಕಡ್ಡಾಯವಲ್ಲ ಎಂದು ತೀರ್ಪು ನೀಡಿತ್ತು. ಅಲ್ಲದೆ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನ ಸಮವಸ್ತ್ರ ನೀತಿ ಪಾಲಿಸುವುದು ಕೂಡ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ತೀರ್ಪು ನೀಡಿತ್ತು.

SCROLL FOR NEXT