ದೇಶ

ಪ್ರೀತಿಸಿದವನನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವತಿ, ಸಂಘಟನೆಗಳಿಂದ ಬೆದರಿಕೆ ಕರೆ!

Vishwanath S

ಲಖನೌ: ತನ್ನ ಪ್ರಿಯತಮನನ್ನು ಮದುವೆಯಾಗುವ ಉದ್ದೇಶದಿಂದ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಅಜಂಗಢ ನಗರದಲ್ಲಿ ಈ ಮದುವೆ ನಡೆದಿದ್ದು ಇದೀಗ ಈ ಜೋಡಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಖಾನ್‍ಪುರ್ ಫತೇಹ್ ಗ್ರಾಮದ ಹಿಂದೂ ಯುವಕ ಸೂರಜ್, ಹೈದರ್‍ಪುರ ಖಾಸ್ ಗ್ರಾಮದ ಮುಸ್ಲಿಂ ಯುವತಿ ಮೋಮಿನ್ ಖಾತೂನ್ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಆದರೆ ಈ ಪ್ರೀತಿಗೆ ಧರ್ಮ ಅಡ್ಡಿಯಾಗಿತ್ತು. ಇವರಿಬ್ಬರ ಪ್ರೀತಿಯನ್ನು ಎರಡು ಕುಟುಂಬಸ್ಥರು ಒಪ್ಪಿರಲಿಲ್ಲ. ಆದರೂ ಇವರಿಬ್ಬರೂ ಮಾತ್ರ ತಮ್ಮ ಪ್ರೀತಿಯನ್ನು ಮುಂದುವರಿಸಿದ್ದರು.

ಮೊದಲಿಗೆ ಮನೆಯವರ ವಿರೋಧ ವ್ಯಕ್ತವಾದರೂ ನಂತರ ಅವರನ್ನು ಒಪ್ಪಿಸಿ ಮೋಮಿನ್ ಖಾತೂನ್ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಸೂರಜ್‍ನನ್ನು ವರಿಸಿದ್ದಾಳೆ. 

ಕಳೆದ ಜುಲೈ 13ರಂದು ಅಟ್ರೌಲಿಯಾ ಸಮ್ಮೋ ಮಾತಾ ದೇವಾಲಯದ ಸಂಕೀರ್ಣದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದೆ. ಹಿಂದೂ ಧರ್ಮವನ್ನು ಸ್ವೀಕರಿಸಿದ ಮೋಮಿನ್ ಖಾತೂನ್ ಹಿಂದೂ ಸಂಪ್ರದಾಯದಂತೆ ಸೂರಜ್ ಕೊರಳಿಗೆ ಹಾರ ಹಾಕಿ ಮದುವೆ ಆಗಿದ್ದಾಳೆ. ಈ ಜೋಡಿಗೆ ಕುಟುಂಬ ಸದಸ್ಯರು ಮತ್ತು ಗಣ್ಯರು ಆಶೀರ್ವದಿಸಿದ್ದರು.

ಮದುವೆ ಫೋಟೋಗಳು ವೈರಲ್ ಆದ ನಂತರ ಇದೀಗ ಈ ಜೋಡಿಗೆ ಸಮುದಾಯದ ಸಂಘಟನೆಗಳಿಂದ ಬೆದರಿಕೆ ಕರೆ ಬರಲಾರಂಭಿಸಿದೆ. 

SCROLL FOR NEXT