ದೇಶ

ಎರಡನೇ ಮದುವೆಗೆ ಅನುಮತಿ ಕಡ್ಡಾಯ: ಬಿಹಾರ ಸರ್ಕಾರ

Srinivasamurthy VN

ಪಾಟ್ನಾ: ಬಿಹಾರ ಸರ್ಕಾರದ ಉದ್ಯೋಗಿಗಳು ಎರಡನೇ ಬಾರಿಗೆ ಮದುವೆಯಾಗಲು ಬಯಸಿದ್ದಲ್ಲಿ ತಮ್ಮ ಇಲಾಖೆಗಳಿಗೆ ಸೂಚಿಸಬೇಕು ಮತ್ತು ಅಗತ್ಯ ಅನುಮತಿಯನ್ನು ಪಡೆದ ನಂತರವೇ ಮುಂದುವರಿಯಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಎಲ್ಲಾ ಸರ್ಕಾರಿ ಅಧಿಕಾರಿಗಳು ತಮ್ಮ ವೈವಾಹಿಕ ಸ್ಥಿತಿಯ ಬಗ್ಗೆ ತಿಳಿಸಬೇಕು ಮತ್ತು ಅಗತ್ಯ ಅನುಮತಿಯನ್ನು ಪಡೆದ ನಂತರವೇ ಎರಡನೇ ವಿವಾಹಕ್ಕೆ ಅರ್ಹರಾಗಬೇಕೆಂದು ರಾಜ್ಯ ಸರ್ಕಾರವು ಹೊಸ ಅಧಿಸೂಚನೆಯಲ್ಲಿ ಹೇಳಿದೆ.

ಅಧಿಸೂಚನೆಯ ಪ್ರಕಾರ, ಎರಡನೇ ಬಾರಿಗೆ ಮದುವೆಯಾಗಲು ಯೋಜಿಸುವ ಯಾವುದೇ ಉದ್ಯೋಗಿ ಮೊದಲು ಸಂಗಾತಿಯಿಂದ ವಿಚ್ಛೇದನ ಪಡೆಯಬೇಕು ಮತ್ತು ಸಂಬಂಧಿಸಿದ ಇಲಾಖೆಗೆ ತಿಳಿಸಬೇಕು. ಉದ್ಯೋಗಿಯ ಮೊದಲ ಪತ್ನಿ ಅಥವಾ ಪತಿ ವಿರೋಧಿಸಿದರೆ, ಎರಡನೇ ಪತ್ನಿ ಅಥವಾ ಪತಿಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ನಿರಾಕರಿಸಲಾಗುತ್ತದೆ ಎಂದು ಹೇಳಿದೆ.

ಏತನ್ಮಧ್ಯೆ, ಸರ್ಕಾರಿ ನೌಕರನು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೆ ಎರಡನೇ ಮದುವೆಯಾಗಿ ಸೇವಾ ಅವಧಿಯಲ್ಲಿ ಮರಣಹೊಂದಿದರೆ, ಅವನ ಅಥವಾ ಅವಳ ಎರಡನೇ ಹೆಂಡತಿ/ಪತಿ ಮತ್ತು ಅವರ ಮಕ್ಕಳು ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ಅರ್ಹರಾಗಿರುವುದಿಲ್ಲ. ರಾಜ್ಯ ಸರ್ಕಾರ ಮೊದಲ ಪತ್ನಿಯ ಮಕ್ಕಳಿಗೆ ಆದ್ಯತೆ ನೀಡಲಿದೆ ಎಂದು ತಿಳಿಸಿದೆ.

ಎಲ್ಲಾ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಡಿಜಿಪಿ ಹೋಮ್ ಗಾರ್ಡ್, ಡಿಜಿಪಿ ಕಾರಾಗೃಹ ಮತ್ತು ಸಂಬಂಧಪಟ್ಟ ಪ್ರತಿಯೊಬ್ಬ ಅಧಿಕಾರಿಯನ್ನು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ಸರ್ಕಾರ ಸೂಚಿಸಿದೆ.
 

SCROLL FOR NEXT