ದೇಶ

ಅರುಣಾಚಲ: ತಲೆಮರೆಸಿಕೊಂಡಿರುವ ಅತ್ಯಾಚಾರ ಆರೋಪಿ, ಬಿಜೆಪಿ ಶಾಸಕನ ಜಾಮೀನು ಅರ್ಜಿ ವಜಾ

Lingaraj Badiger

ಗುವಾಹಟಿ: ಗರ್ಭಿಣಿ ಮಹಿಳೆಯೊಬ್ಬರು ಬಿಜೆಪಿ ಶಾಸಕ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ ನಂತರ ತಲೆಮರೆಸಿಕೊಂಡಿರುವ ಅರುಣಾಚಲ ಪ್ರದೇಶದ ಬಿಜೆಪಿ ಶಾಸಕ ಲೋಕಮ್ ತಸ್ಸಾರ್ ಅವರ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ವಜಾಗೊಳಿಸಿದೆ.

ಕೊಲೊರಿಯಾಂಗ್ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಮ್ ತಸ್ಸಾರ್ ಅವರು ಜುಲೈ 4 ರಂದು ರಾಜ್ಯ ರಾಜಧಾನಿ ಇಟಾನಗರ ಬಳಿಯ ತಮ್ಮ ನಿವಾಸದಲ್ಲಿ 24 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿದ್ದಾರೆ.

ನಿರೀಕ್ಷಣಾ ಜಾಮೀನು ಕೋರಿ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ವಜಾಗೊಳಿಸಿದೆ. ಆರೋಪಿ ಶಾಸಕ ತಸ್ಸಾರ್ ಅವರು ತಲೆಮರೆಸಿಕೊಂಡಿದ್ದು, ಪತ್ತೆಯಾದ ತಕ್ಷಣ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

"ಪ್ರಕರಣದ ತನಿಖೆ ನಡೆಯುತ್ತಿದೆ. ನಾವು ಅವರ ಮನೆ ಮೇಲೆ ದಾಳಿ ನಡೆಸಿದ್ದೇವೆ. ಆದರೆ ಅವರು ಪತ್ತೆಯಾಗಲಿಲ್ಲ. ಅವರು ತಲೆಮರೆಸಿಕೊಂಡಿದ್ದಾರೆ" ಎಂದು ಪಾಪಮ್ ಪಾರೆ ಪೊಲೀಸ್ ವರಿಷ್ಠಾಧಿಕಾರಿ ನೀಲಂ ರೇಗಾ ಮಂಗಳವಾರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಸೋಮವಾರ ನಡೆದ ರಾಷ್ಟ್ರಪತಿ ಚುನಾವಣೆಯಲ್ಲೂ ತಾಸ್ಸಾರ್ ಅವರು ಭಾಗವಹಿಸಲಿಲ್ಲ ಎಂದು ಅವರು ಹೇಳಿದರು. ಶಾಸಕರು ಬಂದು ಮತ ಚಲಾಯಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಪೊಲೀಸ್ ತಂಡ ರಾಜ್ಯ ವಿಧಾನಸಭೆಗೆ ಆಗಮಿಸಿತ್ತು. ಆದರೆ ಅವರು ಬರಲಿಲ್ಲ.
 

SCROLL FOR NEXT