ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಫಾರೂಕ್ ಅಬ್ದುಲ್ಲಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಇಡಿ

Lingaraj Badiger

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್‌ನ ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಚಾರ್ಜ್‌ಶೀಟ್ ಸಲ್ಲಿಸಿದೆ. 

ಇಂದು ಚಾರ್ಜ್‌ಶೀಟ್ ಸಲ್ಲಿಸಿದ ಇಡಿ,  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 84 ವರ್ಷದ ಫಾರೂಕ್ ಅಬ್ದುಲ್ಲಾ ಅವರನ್ನು ಹಲವು ಬಾರಿ ಪ್ರಶ್ನಿಸಿದೆ. ಕೊನೆಯ ಬಾರಿಗೆ ಮೇ 31 ರಂದು ಶ್ರೀನಗರದಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿತ್ತು.

ಫಾರೂಕ್ ಅಬ್ದುಲ್ಲಾ ಅವರು 2019 ರಲ್ಲಿ ಇದೇ ಪ್ರಕರಣದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಡಿಸೆಂಬರ್ 2020 ರಲ್ಲಿ ಇಡಿ ಫಾರೂಕ್ ಅಬ್ದುಲ್ಲಾ ಅವರ 11.86 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು.

ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್‌ಗೆ ಸೇರಿದ ಹಣವನ್ನು ಕ್ರಿಕೆಟ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಸೇರಿದಂತೆ ವಿವಿಧ ಜನರ ವಿವಿಧ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿರುವ ಆರೋಪದ ಪ್ರಕರಣ ಇದಾಗಿದೆ.

ಸಂಘದ ಪದಾಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ ಸಲ್ಲಿಸಿದ ಆರೋಪಪಟ್ಟಿಯ ಆಧಾರದ ಮೇಲೆ ಇಡಿ ಹಣ ವರ್ಗಾವಣೆ ತನಿಖೆ ಆರಂಭಿಸಿದೆ. ಫಾರೂಕ್ ಅಬ್ದುಲ್ಲಾ ಅವರು ಸಂಘದ ಅಧ್ಯಕ್ಷರಾಗಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಕ್ರೀಡಾ ಸಂಸ್ಥೆಯಲ್ಲಿ ನೇಮಕಾತಿಗಳನ್ನು ಮಾಡಿದ್ದಾರೆ.  ಇದರಿಂದಾಗಿ ಬಿಸಿಸಿಐ ಪ್ರಾಯೋಜಿತ ಹಣವನ್ನು ಲಾಂಡರಿಂಗ್ ಮಾಡಲಾಗಿದೆ ಎಂದು ಇಡಿ ಆರೋಪಿಸಿದೆ.

ಕಾಶ್ಮೀರ ಕಣಿವೆಯ ರಾಜಕೀಯ ಪಕ್ಷಗಳು ಕೇಂದ್ರ ತನಿಖಾ ಸಂಸ್ಥೆಗಳ ಸಮನ್ಸ್ ದೇಶದ ಎಲ್ಲ ಪ್ರತಿಪಕ್ಷಗಳ ನಾಯಕರಿಗೆ ಸಾಮಾನ್ಯವಾಗಿದೆ. ವಿಧಾನಸಭೆ ಚುನಾವಣೆ ನಡೆಯುವವರೆಗೂ ಕೇಂದ್ರೀಯ ಸಂಸ್ಥೆಗಳು ವಿರೋಧ ಪಕ್ಷದ ನಾಯಕರಿಗೆ ತೊಂದರೆ ನೀಡುತ್ತಲೇ ಇರುತ್ತವೆ ಎಂದು ಅಬ್ದುಲ್ಲಾ ಹೇಳಿದ್ದಾರೆ.

SCROLL FOR NEXT